ದೇಶ

ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿಗೆ ವಿಪರೀತ ಶಿಕ್ಷೆ ನೀಡಲಾಗಿದೆ: ಪ್ರಶಾಂತ್ ಕಿಶೋರ್

Lingaraj Badiger

ಪಾಟ್ನಾ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ "ವಿಪರೀತ" ಆಯಿತು ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಶನಿವಾರ ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ನಾಯಕನ ಅನರ್ಹತೆ ವಿಚಾರದಲ್ಲಿ ಕೇಂದ್ರ ಸರ್ಕಾರ "ದೊಡ್ಡ ಹೃದಯ" ತೋರಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಮ್ಮ ತವರು ರಾಜ್ಯ ಬಿಹಾರದಲ್ಲಿ "ಜನ್ ಸುರಾಜ್" ಅಭಿಯಾನ ನಡೆಸುತ್ತಿರುವ ಪ್ರಶಾಂತ್ ಕಿಶೋರ್, ಈ ವಿಚಾರದಲ್ಲಿ ಕಾಂಗ್ರೆಸ್ ತನಗೆ ಅನ್ಯಾಯವಾಗಿದೆ ಎಂಬ ಸಂದೇಶವನ್ನು ದೊಡ್ಡ ಪ್ರಮಾಣದಲ್ಲಿ ಜನತೆಗೆ ತಲುಪಿಸಲು ಸಿದ್ಧವಾಗಿಲ್ಲ ಎಂದಿದ್ದಾರೆ.

"ನಾನು ಕಾನೂನು ತಜ್ಞ ಅಲ್ಲ. ಆದರೆ ಕಾನೂನಿನ ಪ್ರಕ್ರಿಯೆಗೆ ಸಂಬಂಧಿಸಿದಂತೆ, ರಾಹುಲ್ ಗಾಂಧಿಗೆ ನೀಡಿದ ಶಿಕ್ಷೆಯ ಪ್ರಮಾಣ ವಿಪರೀತವಾಗಿದೆ ಎಂದು ತೋರುತ್ತಿದೆ. ಚುನಾವಣಾ ಸಂದರ್ಭದಲ್ಲಿ ನಾಯಕರು ಎಲ್ಲಾ ರೀತಿಯ ವಿಷಯಗಳನ್ನು ಹೇಳುತ್ತಾರೆ. ಇದು ಮೊದಲ ನಿದರ್ಶನವಲ್ಲ ಮತ್ತು ಕೊನೆಯದು ಅಲ್ಲ" ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡಿದ IPAC ಸಂಸ್ಥಾಪಕ ಹೇಳಿದ್ದಾರೆ.

ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲುವಾಸ ಅತಿಯಾಯಿತು ಎಂದ ಪ್ರಶಾಂತ್ ಕಿಶೋರ್ , "ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಸಿದ್ಧ ಸಾಲನ್ನು ಕೇಂದ್ರ ಸರ್ಕಾರಕ್ಕೆ ನೆನಪಿಸಲು ನಾನು ಬಯಸುತ್ತೇನೆ. ಕ್ಷುಲ್ಲಕ ಹೃದಯದಿಂದ ಯಾರೂ ದೊಡ್ಡವರಾಗುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT