ಜೈಪುರ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಇಮೇಲ್ ಕಳುಹಿಸಿದ್ದಕ್ಕಾಗಿ ರಾಜಸ್ಥಾನದ ಜೋಧ್‌ಪುರದ 21 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಧಾಕಡ್ ರಾಮ್ ವಿಷ್ಣೋಯ್ ಎಂದು ಗುರುತಿಸಲಾಗಿದೆ.
ಆರೋಪಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಂದೆಗೂ ಬೆದರಿಕೆ ಹಾಕಿದ್ದರು. ಹೀಗಾಗಿ ಪಂಜಾಬ್‌ನ ಪೊಲೀಸರ ತಂಡವೂ ಇತ್ತೀಚೆಗೆ ಜೋಧ್‌ಪುರಕ್ಕೆ ತಲುಪಿತ್ತು.
ಜೋಧ್‌ಪುರ ಜಿಲ್ಲೆಯ ಲುನಿ ಗ್ರಾಮದಲ್ಲಿದ್ದ ಆರೋಪಿಯ ಇಂಟರ್ನೆಟ್ ಪ್ರೋಟೋಕಾಲ್ ವಿಳಾಸಗಳನ್ನು ಪತ್ತೆ ಮಾಡಿದ ನಂತರ ಮುಂಬೈ ಪೊಲೀಸರು ತಾಂತ್ರಿಕ ಸಹಾಯದ ಮೂಲಕ ಧಾಕಡ್‌ನನ್ನು ಪತ್ತೆಹಚ್ಚಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಇಮೇಲ್ ಕಳುಹಿಸಿದ್ದಕ್ಕಾಗಿ ಬಾಂದ್ರಾ ಸರ್ಕಲ್ ಮುಂಬೈ ನಗರ ಪೊಲೀಸ್ ಠಾಣೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದೆ. ಈ ನಿಟ್ಟಿನಲ್ಲಿ ಎಎಸ್‌ಐ ಬಜರಂಗ್ ಜಗತಾಪ್ ನೇತೃತ್ವದಲ್ಲಿ ಮುಂಬೈನಿಂದ ತಂಡವೊಂದು ಭಾನುವಾರ ಜೋಧಪುರಕ್ಕೆ ಬಂದಿತ್ತು.
ಜೋಧ್‌ಪುರ ಕಮಿಷನರ್ ರವಿದತ್ ಗೌರ್ ಅವರ ಸೂಚನೆ ಮೇರೆಗೆ ಎಡಿಸಿಪಿ ಬೋರನಾಡ ಜಯಪ್ರಕಾಶ್ ಅಟಲ್ ಅವರ ನೇತೃತ್ವದಲ್ಲಿ ಲೂನಿ ಪೊಲೀಸ್ ಠಾಣೆ (ಜೋಧ್‌ಪುರ) ಸಹಾಯವನ್ನು ಒದಗಿಸಿದೆ ಎಂದು ಡಿಸಿಪಿ ಪಶ್ಚಿಮ ಗೌರವ್ ಯಾದವ್ ತಿಳಿಸಿದ್ದಾರೆ.
ಪಂಜಾಬ್‌ನ ಗಾಯಕ ಸಿದ್ದು ಮೂಸೆವಾಲಾ ಅವರ ತಂದೆಗೆ ಜೋಧ್‌ಪುರ ಮೂಲದ ಆರೋಪಿ ಧಾಕಡ್ ರಾಮ್ ವಿಷ್ಣೋಯ್ ಇತ್ತೀಚೆಗೆ ಬೆದರಿಕೆ ಹಾಕಿದ್ದಾರೆ. ಆರೋಪಿಯನ್ನು ಬಂಧಿಸಲು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಸದರ್ ಪೊಲೀಸ್ ಠಾಣೆಯ ತಂಡವು ಶುಕ್ರವಾರ (ಮಾರ್ಚ್ 24) ಜೋಧ್‌ಪುರಕ್ಕೆ ಬಂದಿತ್ತು.
ಲೂನಿಯ ಎಸ್‌ಎಚ್‌ಒ ಈಶ್ವರ್ ಚಂದ್ರ ಪರೀಕ್ ತಂಡವು ಆರೋಪಿ ಧಾಕಡ್ ರಾಮ್ ವಿಷ್ಣೋಯ್‌ನನ್ನು ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆರೋಪಿಯನ್ನು ಈ ಹಿಂದೆಯೂ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿತ್ತು. 2022ರ ಸೆಪ್ಟೆಂಬರ್ 12ರಂದು, ಸರ್ದಾರ್‌ಪುರ ಪೊಲೀಸ್ ಠಾಣೆಯ ತಂಡವು ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಧಾಕಡ್ ರಾಮ್‌ನನ್ನು ಬಂಧಿಸಿತ್ತು.
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸಹವರ್ತಿ ಗೋಲ್ಡಿ ಬ್ರಾರ್ ಅವರನ್ನು ಅನುಕರಿಸುವ ಇಮೇಲ್ ಅನ್ನು ಧಾಕಡ್ ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನನಗೆ ಮಕ್ಕಳು ಬೇಕು, ಆದರೆ ತಾಯಿ ಬೇಡ - ಮಕ್ಕಳನ್ನು ನೋಡಿಕೊಳ್ಳಲು ನನ್ನ ಜೊತೆ ಇಡೀ ಹಳ್ಳಿಯಿದೆ: ಸಲ್ಮಾನ್ ಖಾನ್
ಸದ್ಯ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಬಿಷ್ಣೋಯ್ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್‌ನನ್ನು ನಿರ್ಮೂಲನೆ ಮಾಡುವುದು ತನ್ನ ಗುರಿ ಎಂದು ಹೇಳಿದ್ದರು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿಸಲ್ಪಟ್ಟಿರುವ ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಕೊಂದ ಆರೋಪಕ್ಕಾಗಿ ಖಾನ್, ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರ ಈ ವಿಷಯವನ್ನು ಮುಕ್ತಾಯಗೊಳಿಸಲಾಗುವುದು ಎಂದು ಅವರು ಹೇಳಿದರು.