ದೇಶ

2000 ರೂ. ನೋಟ್ ನಿಷೇಧ: ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ, ಮತ್ತೊಂದು 'ತುಘಲಕ್ ನಾಟಕ' ಎಂದ ದೀದಿ

Lingaraj Badiger

ನವದೆಹಲಿ: ಆರ್ ಬಿಐ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ನಾಯಕರು ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಮತ್ತೊಂದು "ತುಘಲಕಿ ನೋಟು ಅಮಾನ್ಯೀಕರಣ ಡ್ರಾಮ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಇದು ಎರಡನೇ "ನೋಟುಬಂಡಿ" ಕಸರತ್ತು ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಇದು ನೋಟು ಅಮಾನ್ಯೀಕರಣ ಅಲ್ಲ ಎಂದಿರುವ ಬಿಜೆಪಿ, ಮನಮೋಹನ್ ಸಿಂಗ್ ಆಳ್ವಿಕೆಯಲ್ಲಿಯೂ ಹಳೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿತ್ತು ಎಂದು ಕಾಂಗ್ರೆಸ್ ನೆನಪಿಸಿದೆ.

2000 ರೂಪಾಯಿ ನೋಟ್ ನಿಷೇಧ ಕ್ರಮವು "ಸಾಮಾನ್ಯ ಜನರನ್ನು ಮತ್ತೊಮ್ಮೆ ತೀವ್ರ ಸಂಕಷ್ಟಕ್ಕೆ ಸಿಲುಕಿಸಲಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "2000 ರೂಪಾಯಿ ನೋಟ್ ನಿಷೇಧ ಮತ್ತೊಂದು ವಿಚಿತ್ರ ಮತ್ತು ತುಘಲಕಿ ನೋಟು ಅಮಾನ್ಯೀಕರಣದ ನಾಟಕವಾಗಿದ್ದು, ಇದು ಸಾಮಾನ್ಯ ಜನರನ್ನು ಮತ್ತೊಮ್ಮೆ ತೀವ್ರ ಸಂಕಷ್ಟಕ್ಕೆ ಸಿಲುಕಿಸಲಿದೆ. ಈ ದುಷ್ಕೃತ್ಯದ ಕ್ರಮಗಳು ಮೂಲಭೂತವಾಗಿ ಜನವಿರೋಧಿ ಎಂದು ಆರೋಪಿಸಿದ್ದಾರೆ.

ಇನ್ನು ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಖರ್ಗೆ, "ಮೊದಲ ನೋಟು ಅಮಾನ್ಯೀಕರಣದಿಂದ ನೀವು ಆರ್ಥಿಕತೆಯನ್ನು ಅಧೋಗತಿಗೆ ತಳ್ಳಿದಿರಿ. ನಿಮ್ಮ ತಪ್ಪು ನಿರ್ಧಾರದಿಂದಾಗಿ ಇಡೀ ಅಸಂಘಟಿತ ವಲಯ ನಾಶವಾಯಿತು, ಎಂಎಸ್‌ಎಂಇಗಳು ಮುಚ್ಚಲ್ಪಟ್ಟವು ಮತ್ತು ಕೋಟಿಗಟ್ಟಲೆ ಉದ್ಯೋಗ ನಷ್ಟವಾಯಿತು. ಈಗ, ಮತ್ತೆ 2000 ರೂಪಾಯಿ ನೋಟು ಅಮಾನ್ಯೀಕರಣ... ಇದು ಹಿಂದಿನ ನಿಮ್ಮ ತಪ್ಪು ನಿರ್ಧಾರ ಮುಚ್ಚಿಕೊಳ್ಳುವ ಪ್ರಯತ್ನದ ಭಾಗವೇ? ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದ್ದಾರೆ.

2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಆರ್‌ಬಿಐ ಶುಕ್ರವಾರ ತಿಳಿಸಿದೆ. ಆದರೆ, ಅದು ಸೆಪ್ಟೆಂಬರ್ 30ರವರೆಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ನೀಡಿದೆ. 

ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್ 8 ರಂದು ತಮ್ಮ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪ್ರಕಟಿಸಿದರು ಮತ್ತು ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತು.

SCROLL FOR NEXT