ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಸಚಿವೆ ಅತಿಶಿ
ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಸಚಿವೆ ಅತಿಶಿ 
ದೇಶ

ಅರವಿಂದ ಕೇಜ್ರಿವಾಲ್ ತೂಕ ಇಳಿಕೆ; ಅವರ ಆರೋಗ್ಯ ಅಪಾಯದಲ್ಲಿ: BJP ವಿರುದ್ಧ ಸಚಿವೆ ಅತಿಶಿ ಆರೋಪ

Ramyashree GN

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದಾಗಿನಿಂದ ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಅವರನ್ನು ಜೈಲಿನಲ್ಲಿ ಇರಿಸುವ ಮೂಲಕ ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಎಎಪಿ ಹಿರಿಯ ನಾಯಕಿ ಅತಿಶಿ ಬುಧವಾರ ಆರೋಪಿಸಿದ್ದಾರೆ.

ಆದಾಗ್ಯೂ, ಕೇಜ್ರಿವಾಲ್ ಇರುವ ತಿಹಾರ್ ಜೈಲಿನ ಆಡಳಿತವು ಈ ಆರೋಪಗಳನ್ನು ತಳ್ಳಿಹಾಕಿದೆ. ತಿಹಾರ್ ಜೈಲಿನ ಹಿರಿಯ ಅಧಿಕಾರಿಯೊಬ್ಬರು ಕೇಜ್ರಿವಾಲ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದ್ದು, ಸೋಮವಾರ ದೆಹಲಿ ನ್ಯಾಯಾಲಯವು ಏಪ್ರಿಲ್ 15 ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

'ಅರವಿಂದ್ ಕೇಜ್ರಿವಾಲ್ ಜೀ ಅವರು ಮಧುಮೇಹಿಯಾಗಿದ್ದು, ಆರೋಗ್ಯ ಸಮಸ್ಯೆಗಳ ನಡುವೆಯೂ ಅವರು ದಿನದ 24 ಗಂಟೆ ದೇಶ ಸೇವೆಯಲ್ಲಿ ನಿರತರಾಗಿದ್ದರು. ತಮ್ಮ ಬಂಧನದಿಂದಾಗಿ ಕೇಜ್ರಿವಾಲ್ ಅವರ ತೂಕ 4.5 ಕೆಜಿಯಷ್ಟು ಕಡಿಮೆಯಾಗಿದೆ. ಇದು ತುಂಬಾ ಕಳವಳಕಾರಿಯಾಗಿದೆ. ಬಿಜೆಪಿ ಅವರನ್ನು ಜೈಲಿಗೆ ಹಾಕುವ ಮೂಲಕ ಅವರ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿದೆ' ಎಂದು ಅವರು ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ಇಡೀ ದೇಶವಲ್ಲ, ದೇವರು ಕೂಡ ಅವರನ್ನು (ಬಿಜೆಪಿ) ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ತಿಹಾರ್ ಜೈಲಿನಲ್ಲಿ ಮನೆಯಲ್ಲಿ ತಯಾರಿಸಿದ ಊಟ ಸೇವನೆಗೆ ಅವಕಾಶ ನೀಡಲಾಗಿದೆ.

ಮಂಗಳವಾರ ಬೆಳಗ್ಗೆ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಕೇಜ್ರಿವಾಲ್ ಅವರ ಶುಗರ್ ಲೆವೆಲ್ 50ಕ್ಕಿಂತ ಕಡಿಮೆ ಇದ್ದು, ವೈದ್ಯರ ಸಲಹೆ ಮೇರೆಗೆ ಔಷಧ ನೀಡಲಾಗಿದೆ. ಅವರು ತಿಹಾರ್ ಜೈಲು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದರು.

SCROLL FOR NEXT