ಶಶಿ ತರೂರ್
ಶಶಿ ತರೂರ್ 
ದೇಶ

ಲೋಕಸಭೆ ಚುನಾವಣೆ 2024: ಕಾಂಗ್ರೆಸ್ ನಾಯಕ ಶಶಿ ತರೂರ್ ಆಸ್ತಿ ಎಷ್ಟಿದೆ ಗೊತ್ತಾ?

Ramyashree GN

ತಿರುವನಂತಪುರಂ: ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಗೆಲುವಿನ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ತಮ್ಮ ನಾಮಪತ್ರ ಸಲ್ಲಿಸಿದ್ದು, 55 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

ತಿರುವನಂತಪುರದ ಹಾಲಿ ಸಂಸದರಾದ ತರೂರ್, 2022-2023ರ ಹಣಕಾಸು ವರ್ಷದಲ್ಲಿ ಒಟ್ಟು 4.32 ಕೋಟಿ ರೂ. ಆದಾಯವನ್ನು ಘೋಷಿಸಿದ್ದಾರೆ.

ನಾಮಪತ್ರದ ಜೊತೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ನೀಡಿರುವ ತರೂರ್, 19 ಬ್ಯಾಂಕ್ ಖಾತೆಗಳಲ್ಲಿ ವಿವಿಧ ಮೊತ್ತದ ಠೇವಣಿ ಮತ್ತು ವಿವಿಧ ಬಾಂಡ್‌ಗಳು, ಡಿಬೆಂಚರ್‌ಗಳು, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಸೇರಿದಂತೆ 49 ಕೋಟಿ ರೂ.ಗೂ ಹೆಚ್ಚು ಸ್ಥಿರಾಸ್ತಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ.

ಅವರ ಅಫಿಡವಿಟ್ ಪ್ರಕಾರ, ಅವರ ಚರಾಸ್ತಿಯಲ್ಲಿ 32 ಲಕ್ಷ ರೂ. ಮೌಲ್ಯದ 534 ಗ್ರಾಂ ಚಿನ್ನ ಮತ್ತು 36,000 ರೂ. ನಗದು ಸೇರಿದೆ.

6.75 ಕೋಟಿ ರೂ.ಗೂ ಅಧಿಕ ಮೌಲ್ಯದ ಸ್ತಿರಾಸ್ತಿಯನ್ನು ಹೊಂದಿದ್ದು, ಪಾಲಕ್ಕಾಡ್‌ನಲ್ಲಿ 1.56 ಲಕ್ಷ ರೂಪಾಯಿ ಮೌಲ್ಯದ ಪಿತ್ರಾರ್ಜಿತವಾಗಿ ಬಂದಿರುವ 2.51 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ತಿರುವನಂತಪುರಂನಲ್ಲಿ 6.20 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ 10.47 ಎಕರೆ ಜಮೀನು ಹೊಂದಿದ್ದಾರೆ. ರಾಜ್ಯ ರಾಜಧಾನಿಯಲ್ಲಿರುವ ಅವರ ನಿವಾಸದ ಮೌಲ್ಯ ಈಗ ಸುಮಾರು 52 ಲಕ್ಷ ರೂ. ಆಗಿದೆ. ಅಲ್ಲದೆ, ಮಾರುತಿ ಸಿಯಾಜ್ ಮತ್ತು ಮಾರುತಿ ಎಕ್ಸ್‌ಎಲ್6 ಎಂಬ ಎರಡು ಕಾರುಗಳು ಇರುವುದಾಗಿ ಅಫಿಡವಿಟ್ ತಿಳಿಸಿದೆ.

ಫ್ಲೆಚರ್ ಸ್ಕೂಲ್ ಆಫ್ ಲಾ ಅಂಡ್ ಡಿಪ್ಲೊಮಸಿ (ಟಫ್ಟ್ಸ್ ಯೂನಿವರ್ಸಿಟಿ, ಯುಎಸ್‌ಎ) ನಿಂದ ಕಾನೂನು ಮತ್ತು ರಾಜತಾಂತ್ರಿಕತೆಯಲ್ಲಿ ಪಿಎಚ್‌ಡಿ ಮತ್ತು ಯುಎಸ್‌ಎಯ ಪುಗೆಟ್ ಸೌಂಡ್ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಡಾಕ್ಟರ್ ಆಫ್ ಲೆಟರ್ಸ್ (ಗೌರವ) ಹೊಂದಿರುವ ತರೂರ್ ಅವರನ್ನು ದೇಶಾದ್ಯಂತ ಒಂಬತ್ತು ಪ್ರಕರಣಗಳಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ.

ಅವರ ವಿರುದ್ಧದ ಹೆಚ್ಚಿನ ಎಫ್‌ಐಆರ್‌ಗಳು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ದಾಖಲಾಗಿವೆ ಮತ್ತು ಕೇರಳದಲ್ಲಿನ ಒಂದು ಪ್ರಕರಣವು ಕಾನೂನುಬಾಹಿರ ಸಭೆ ಮತ್ತು ಗಲಭೆಗೆ ಸಂಬಂಧಿಸಿದೆ.

ಅವರು ನ್ಯಾಯಾಲಯದ ನಾಲ್ಕು ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಎರಡು ಮಾನನಷ್ಟ ಮೊಕದ್ದಮೆಗಳಾಗಿದ್ದು, ಕೇರಳ ಮತ್ತು ದೆಹಲಿಯಲ್ಲಿ ತಲಾ ಒಂದು ಪ್ರಕರಣಗಳಿವೆ. ಕೋಲ್ಕತ್ತಾದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಮತ್ತೊಂದು ಪ್ರಕರಣ ಎದುರಿಸುತ್ತಿದ್ದಾರೆ ಎಂದು ಅಫಿಡವಿಟ್ ಹೇಳಿದೆ.

2014ರಲ್ಲಿ ತರೂರ್ ಅವರು 23 ಕೋಟಿ ರೂ.ಗೂ ಅಧಿಕ ಆಸ್ತಿ ಘೋಷಿಸಿದ್ದರೆ, 2019ರಲ್ಲಿ 35 ಕೋಟಿ ರೂ. ಆಸ್ತಿ ಘೋಷಿಸಿದ್ದರು.

SCROLL FOR NEXT