ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಮಹಿಳಾ ಕುಸ್ತಿಪಟುವಿನ ಭದ್ರತೆಯನ್ನು ತಕ್ಷಣ ಮರುಸ್ಥಾಪಿಸುವಂತೆ ದೆಹಲಿ ನ್ಯಾಯಾಲಯ ಗುರುವಾರ ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ.
ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಜಪೂತ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಅಲ್ಲದೆ ಬ್ರಿಜ್ ಭೂಷಣ್ ವಿರುದ್ಧದ ಪ್ರಕರಣದಲ್ಲಿ ಅವರು ಹೇಳಿಕೆ ನೀಡಲು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಲಿರುವ ಕಾರಣ ಕುಸ್ತಿಪಟುವಿನ ಸುರಕ್ಷತೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ಕುಸ್ತಿಪಟು ವಿನೇಶ್ ಪೋಗಟ್ ಅವರು ಆರೋಪಿಸಿದ್ದರು. ಇದರ ಬೆನ್ನಲ್ಲೇ ತಮ್ಮ ಭದ್ರತೆಯನ್ನು ಹಠಾತ್ ಹಿಂಪಡೆಯಲಾಗಿದೆ ಎಂದು ಆರೋಪಿಸಿ ಮೂವರು ಕುಸ್ತಿಪಟುಗಳ ಪರವಾಗಿ ಹಿರಿಯ ವಕೀಲೆ ರೆಬೆಕಾ ಜಾನ್ ಅವರು ಅರ್ಜಿ ಸಲ್ಲಿಸಿದ್ದರು.
ಭದ್ರತೆಯನ್ನು ಹಠಾತ್ ತೆಗೆದುಹಾಕುವುದರಿಂದ ಕ್ರೀಡಾಪಟುಗಳ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಜಾನ್ ಹೇಳಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಭದ್ರತೆ ಹಿಂತೆಗೆತದ ಹಿಂದಿನ ಕಾರಣಗಳ ಬಗ್ಗೆ ಶುಕ್ರವಾರದೊಳಗೆ ವಿವರವಾದ ವಿವರಣೆಯನ್ನು ನೀಡುವಂತೆ ಪೊಲೀಸರಿಗೆ ಸೂಚಿಸಿದೆ.
ಮಧ್ಯಂತರ ಕ್ರಮವಾಗಿ, ಸಾಕ್ಷಿಗಳ ಪಟ್ಟಿಯಲ್ಲಿ "ಸಂತ್ರಸ್ತೆ ಸಂಖ್ಯೆ 4" ಎಂದು ಗುರುತಿಸಲಾದ ದೂರುದಾರರಿಗೆ "ತಕ್ಷಣ ಮತ್ತು ಸೂಕ್ತವಾಗಿ" ಭದ್ರತೆಯನ್ನು ಮರುಸ್ಥಾಪಿಸುವಂತೆ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ಅವರು ಪೊಲೀಸರಿಗೆ ಆದೇಶಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲಿರುವ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ಎಕ್ಸ್‌ನಲ್ಲಿ ವಿನೇಶ್ ಫೋಗಟ್ ಪೋಸ್ಟ್ ಮಾಡಿದ್ದರು.