ಕೋಲ್ಕತ್ತಾ: ಕರ್ತವ್ಯನಿರತ ಡಾಕ್ಟರ್ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಅಭಿಜಿತ್ ಮಂಡಲ್ ಹಾಗೂ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲರಾದ ಸಂದೀಪ್ ಘೋಷ್ ಅವರಿಗೆ ಸೀಲ್ದಾ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಆಗಸ್ಟ್ 9 ರಂದು ಆರ್ ಜಿ ಕರ್ ಆಸ್ಪತ್ರೆಯಲ್ಲಿ ನಡೆದಿದ್ದ ಕರ್ತವ್ಯ ನಿರತ ಮಹಿಳಾ ಡಾಕ್ಟರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿಎಫ್ ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಿರುವ ಆರೋಪ ಮಂದಲ್ ಅವರದಾಗಿತ್ತು. ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಿದ ಆರೋಪ ಘೋಷ್ ವಿರುದ್ಧ ಕೇಳಿಬಂದಿತ್ತು.
ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಇಬ್ಬರನ್ನು ಬಂಧಿಸಿತ್ತು. 90 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಸೀಲ್ದಾ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಜಾಮೀನು ಮಂಜೂರು ಮಾಡಿದ್ದಾರ ಎಂದು ಘೋಷ್ ಪರ ವಕೀಲರು ತಿಳಿಸಿದರು.
ನ್ಯಾಯಾಂಗ ಬಂಧನದಲ್ಲಿರುವ ಘೋಷ್, ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಣಕಾಸು ಅವ್ಯವಹಾರ ಆರೋಪದ ಮತ್ತೊಂದು ಪ್ರಕರಣದಲ್ಲಿ ಜೈಲಿನಲ್ಲಿಯೇ ಇರಬೇಕಾಗಿದೆ.