ಅಜಂಗಢ: ಸಾಮೂಹಿಕ ಅತ್ಯಾಚಾರ ಸಂತ್ರಸ್ಥೆಯೊಬ್ಬರು ಗರ್ಭ ಧರಿಸಿ ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿರುವ ಧಾರುಣ ಘಟನೆ ಉತ್ತರ ಪ್ರದೇಶದ ಅಜಂಗಢದಲ್ಲಿ ವರದಿಯಾಗಿದೆ.
ಸುಮಾರು 40ವರ್ಷ ವಯಸ್ಸಿನ ಮಹಿಳೆಗೆ ಅದಾಗಲೇ 20 ವರ್ಷ ವಯಸ್ಸಿನ ಮಗನಿದ್ದು, ಈಗ್ಗೇ 6 ತಿಂಗಳ ಹಿಂದೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.
ಇದೀಗ ಸಂತ್ರಸ್ಥ ಮಹಿಳೆ 5 ತಿಂಗಳ ಗರ್ಭಿಣಿಯಾಗಿದ್ದು, ತಾನು ಗರ್ಭಧರಿಸಿದ್ದೇನೆ ಎಂಬ ಮಾಹಿತಿಯೇ ಇಲ್ಲದ ಮಹಿಳೆ ಅನಾರೋಗ್ಯ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ 10 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದ ಸಂತ್ರಸ್ಥ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದಳು. ಕಳೆದ ಜುಲೈನಲ್ಲಿ ಸುಮಾರು 6 ಜನ ದುಷ್ಕರ್ಮಿಗಳು ಆಕೆಯನ್ನು ಜನನಿಭಿಡ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು.
ಬಳಿಕ ಮನೆಗೆ ಮರಳಿದ್ದ ಮಹಿಳೆ ಆ ವಿಚಾರವನ್ನು ಯಾರೊಂದಿಗೆ ಹೇಳಿಕೊಂಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಆಕೆಯ ಆರೋಗ್ಯ ಗಣನೀಯವಾಗಿ ಹದಗೆಡುತ್ತಿತ್ತು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ವೈದ್ಯರ ಬಳಿ ಕರೆದೊಯ್ದಾಗ ಆಕೆ 5 ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ.
ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆಯನ್ನು ಅಜಂಗಢದ ಮಹಿಳಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅಂತೆಯೇ ಐದು ತಿಂಗಳ ಗರ್ಭಿಣಿಯಾಗಿದ್ದ ಆಕೆ ತೀವ್ರ ರಕ್ತ ಹೀನತೆಯಿಂದ ಬಳಲುತ್ತಿದ್ದರು.
ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಆಕೆಯ ಸ್ಥಿತಿ ಹದಗೆಟ್ಟು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಚಿರಾಗ್ ಜೈನ್ ಹೇಳಿದ್ದಾರೆ.
ಈ ವಿಚಾರ ತಿಳಿದಕೂಡಲೇ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆಕೆಯ ವೈದ್ಯಕೀಯ ಪರೀಕ್ಷಾ ವರದಿ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.