ರಾಂಚಿ: ಒಡಿಶಾ ರಾಜ್ಯಪಾಲ ರಘುಬರ್ ದಾಸ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಲು ಸಿದ್ಧರಾಗಿದ್ದಾರೆ.
ಇದಕ್ಕೂ ಮೊದಲು ಸೆಪ್ಟೆಂಬರ್ 11 ರಂದು, ಒಡಿಶಾ ಗವರ್ನರ್ ರಘುಬರ್ ದಾಸ್ ಅವರು ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ತಮ್ಮ ಪ್ರೊಫೈಲ್ ಚಿತ್ರದ ಬಣ್ಣವನ್ನು ಬದಲಾಯಿಸಿದ್ದರು. ಇದು ಅವರು ಮತ್ತೆ ಜಾರ್ಖಂಡ್ ರಾಜಕೀಯಕ್ಕೆ ಮರಳುತ್ತಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿತ್ತು. ಇದೀಗ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ನಡೆದ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ದಾಸ್ ಅವರ ಹಳೆಯ ಕ್ಷೇತ್ರವಾದ ಜಮ್ಶೆಡ್‌ಪುರ ಪೂರ್ವದಿಂದ ಸ್ಪರ್ಧಿಸಬಹುದು ಎಂದು ಹೆಚ್ಚಾಗಿ ನಂಬಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಈ ಆಲೋಚನೆಯನ್ನು ಮುಂದೂಡಲಾಯಿತು ಮತ್ತು ಅವರ ಸೊಸೆಯನ್ನು ಅಲ್ಲಿಂದ ಕಣಕ್ಕೆ ಇಳಿಸಲಾಯಿತು.
ರಾಷ್ಟ್ರಪತಿ ಭವನದ ಪತ್ರಿಕಾ ಪ್ರಕಟಣೆಯ ಪ್ರಕಾರ, ಭಾರತದ ರಾಷ್ಟ್ರಪತಿಗಳು ರಘುಬರ್ ದಾಸ್ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಪ್ರಸ್ತುತ ಮಿಜೋರಾಂ ರಾಜ್ಯಪಾಲರಾಗಿರುವ ಡಾ.ಹರಿ ಬಾಬು ಕಂಬಂಪತಿ ಅವರನ್ನು ಒಡಿಶಾ ನೂತನ ರಾಜ್ಯಪಾಲರಾಗಿ ನೇಮಿಸಲಾಗಿದೆ.