ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ರಷ್ಯಾ ತಲುಪಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಧಾನಿಯನ್ನು ಸ್ವಾಗತಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡ ಪುಟಿನ್, ರಷ್ಯಾಗೆ ಸ್ವಾಗತ ಆತ್ಮೀಯ ಮಿತ್ರ, ನಿಮ್ಮನ್ನು ಭೇಟಿ ಮಾಡುತ್ತಿರುವುದು ಸಂತಸ ಮೂಡಿಸಿದೆ ಎಂದು ಹೇಳಿದ್ದಾರೆ.
ನಾಳೆ ನಾವು ಔಪಚಾರಿಕ ಮಾತುಕತೆ ನಡೆಸಲಿದ್ದೇವೆ, ಆದರೆ ಇಂದು ನಾವು ಅನೌಪಚಾರಿಕ ಮಾತುಕತೆ ನಡೆಸುತ್ತಿದ್ದೇವೆ ಎಂದು ಪ್ರಧಾನಿಗೆ ಔತಣಕೂಟ ಏರ್ಪಡಿಸಿದ ಪುಟಿನ್ ಹೇಳಿದ್ದಾರೆ.
ಅಧ್ಯಕ್ಷರ ನಿವಾಸಕ್ಕೆ ಆಹ್ವಾನಿಸಿದ್ದಕ್ಕಾಗಿ ಪ್ರಧಾನಿ ಮೋದಿ ಪುಟಿನ್ ಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ನಿವಾಸಕ್ಕೆ ಭೇಟಿ ನೀಡುತ್ತಿರುವುದು ಸಂತಸ ಮೂಡಿಸಿದೆ ಎಂದು ಮೋದಿ ಹೇಳಿದ್ದಾರೆ.
ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ರಷ್ಯಾದ ಉಪ ಪ್ರಧಾನಿ ಡೆನ್ನಿಸ್ ಮಂಟುರೊವ್ ಸ್ವಾಗತಿಸಿದರು. ಮಾಸ್ಕೋ ಮೂಲಕ ವಾಹನದಲ್ಲಿ ಪ್ರಧಾನಿ ಮೋದಿ ಭಾರತೀಯ ಸಮುದಾಯದ ಸದಸ್ಯರತ್ತಾ ಕೈ ಬೀಸುತ್ತಾ ಸಾಗಿದರು. ಈ ವೇಳೆ ‘ಮೋದಿ ಮೋದಿ’ ಎಂದು ಘೋಷಣೆ ಕೇಳಿಬಂದಿತು.
ಇದು 5 ವರ್ಷಗಳಲ್ಲಿ ಮಾಸ್ಕೋಗೆ ಪ್ರಧಾನಿ ಮೋದಿಯವರ ಮೊದಲ ಭೇಟಿಯಾಗಿದೆ (ಕೊನೆಯ ಬಾರಿ 2019 ರಲ್ಲಿ ಅವರು ವ್ಲಾಡಿವೋಸ್ಟಾಕ್‌ಗೆ ಭೇಟಿ ನೀಡಿದ್ದರು). ಮೋದಿ ಮತ್ತು ಪುಟಿನ್ ಜುಲೈ 9 ರಂದು ಮಾಸ್ಕೋದಲ್ಲಿ 22 ನೇ ಭಾರತ ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮಂಗಳವಾರ, ಪಿಎಂ ಮೋದಿ ಅವರು 'ಅಜ್ಞಾತ ಸೈನಿಕನ ಸಮಾಧಿ'ಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ ಮತ್ತು ನಂತರ ರೊಸಾಟಮ್ ಪೆವಿಲಿಯನ್‌ಗೆ ಭೇಟಿ ನೀಡುತ್ತಾರೆ. ಅವರು ಮಂಗಳವಾರ ಮಧ್ಯಾಹ್ನ ಅಧ್ಯಕ್ಷ ಪುಟಿನ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆಗಳ ನಂತರ ನಿರ್ಬಂಧಿತ ಸಭೆಯನ್ನು ಹೊಂದಿರುತ್ತಾರೆ. ನಂತರ ಸಂಜೆ ವಿಯೆನ್ನಾಕ್ಕೆ ತೆರಳಲಿದ್ದಾರೆ.