ಅಹ್ಮದಾಬಾದ್: ಕರ್ನಾಟಕದಲ್ಲಿ ಡೆಂಗ್ಯೂ ಹಾವಳಿ ವ್ಯಾಪಕವಾಗಿರುವಂತೆಯೇ ಅತ್ತ ಗುಜರಾತ್ ನಲ್ಲಿ ಶಂಕಿತ ವೈರಸ್ ಸೋಂಕಿಗೆ 4 ಮಕ್ಕಳು ಸಾವನ್ನಪ್ಪಿದ್ದಾರೆ.
ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯಲ್ಲಿ ನಾಲ್ಕು ಮಕ್ಕಳು ವಿಚಿತ್ರ ವೈರಲ್ ಗೆ ಬಲಿಯಾಗಿದ್ದು, ಇದೇ ಸೋಂಕಿಗೆ ತುತ್ತಾಗಿರುವ ಚಂಡೀಪುರದ ಇಬ್ಬರು ಮಕ್ಕಳು ಜಿಲ್ಲೆಯ ಹಿಮ್ಮತ್‌ನಗರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಎಲ್ಲಾ ಆರು ಮಕ್ಕಳ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ದೃಢೀಕರಣಕ್ಕಾಗಿ ಕಳುಹಿಸಲಾಗಿದ್ದು, ಅದರ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಸಬರಕಾಂತ ಮುಖ್ಯ ಜಿಲ್ಲಾ ಆರೋಗ್ಯ ಅಧಿಕಾರಿ ರಾಜ್ ಸುತಾರಿಯಾ ತಿಳಿಸಿದ್ದಾರೆ.
ಈ ವಿಚಿತ್ರ ವೈರಸ್ ಸೋಂಕು ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ) ಸೋಂಕಿನಂತೆಯೇ ಇದ್ದು, ಈ ಸೋಂಕು ರೋಗಕಾರಕ ವೈರಸ್ ರಾಬ್ಡೋವಿರಿಡೆ ಕುಟುಂಬದ ವೆಸಿಕ್ಯುಲೋವೈರಸ್ ಕುಟುಂಬಕ್ಕೆ ಸೇರಿದ್ದಾಗಿದೆ. ಇದು ಸೊಳ್ಳೆಗಳು, ಉಣ್ಣಿ ಮತ್ತು ಮರಳು ನೊಣಗಳಂತಹ ವಾಹಕಗಳಿಂದ ಹರಡುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಜುಲೈ 10 ರಂದು ನಾಲ್ಕು ಮಕ್ಕಳು ಸಾವನ್ನಪ್ಪಿದ ನಂತರ ಹಿಮ್ಮತ್‌ನಗರ ಸಿವಿಲ್ ಆಸ್ಪತ್ರೆಯ ಮಕ್ಕಳ ವೈದ್ಯರು ಮಕ್ಕಳ ಸಾವಿಗೆ ಚಂಡಿಪುರ ವೈರಸ್‌ನ ಪಾತ್ರವನ್ನು ಶಂಕಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಇತರ ಇಬ್ಬರು ಮಕ್ಕಳಲ್ಲಿ ಇದೇ ರೀತಿಯ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರು ಅದೇ ವೈರಸ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಸುತಾರಿಯಾ ಮಾಹಿತಿ ನೀಡಿದರು.
ಸೋಂಕನ್ನು ತಡೆಗಟ್ಟಲು, ಪೀಡಿತ ಪ್ರದೇಶಗಳಲ್ಲಿ ಮರಳು ನೊಣಗಳನ್ನು ಕೊಲ್ಲಲು ಕೀಟನಾಶಕ ಹೊಗೆ ಸೇರಿದಂತೆ ತಡೆಗಟ್ಟುವ ಕ್ರಮಗಳನ್ನು ನಡೆಸಲು ಜಿಲ್ಲಾ ಅಧಿಕಾರಿಗಳು ತಂಡಗಳನ್ನು ನಿಯೋಜಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.