ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಸ್ಥಾನದ ಆಫರ್ ನೀಡಲಾಗಿತ್ತು ಎಂಬ ಜೆಡಿಯು ನಾಯಕ ಕೆಸಿ ತ್ಯಾಗಿ ಅವರ ಹೇಳಿಕೆಯನ್ನು ಕಾಂಗ್ರೆಸ್ ತಳ್ಳಿಹಾಕಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಅಂತಹ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.
ಎನ್‌ಡಿಎಯನ್ನು ಮೂರನೇ ಅವಧಿಗೆ ಸರ್ಕಾರ ರಚಿಸುವುದನ್ನು ತಡೆಯುವ ಪ್ರಯತ್ನದಲ್ಲಿ ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟಕ್ಕೆ ಮರಳಿ ಪಡೆಯಲು ಇಂಡಿಯಾ ಬ್ಲಾಕ್ ಪ್ರಯತ್ನಿಸುತ್ತಿದೆ ಎಂಬ ಊಹಾಪೋಹಗಳ ಮಧ್ಯೆ ಕೆಸಿ ತ್ಯಾಗಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
'ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ನಡೆದುಕೊಂಡ ರೀತಿಯಿಂದ ನಮಗೆ ನೋವಾಗಿದೆ. ಆರಂಭದಲ್ಲಿ ಇಂಡಿಯಾ ಬಣ ಮೈತ್ರಿಕೂಟ ರಚನೆಗೆ ಕಾರಣಕರ್ತರಾದ ನಿತೀಶ್ ಕುಮಾರ್ ಮೈತ್ರಿಕೂಟದ ಸಂಚಾಲಕರಾಗಲು ಅರ್ಹರಲ್ಲ ಎಂದು ಭಾವಿಸಿದವರು ಈಗ ಅವರಿಗೆ ಪ್ರಧಾನಿ ಹುದ್ದೆಯನ್ನು ನೀಡುತ್ತಿದ್ದಾರೆ, ಆದರೆ ಜೆಡಿಯು ಈಗಾಗಲೇ ಅಂತಹ ಎಲ್ಲಾ ಆಫರ್‌ಗಳನ್ನು ತಿರಸ್ಕರಿಸಿದೆ ಮತ್ತು ಮುಂದಿನ ಐದು ವರ್ಷಗಳ ಕಾಲ ಎನ್‌ಡಿಎ ಜೊತೆ ಕೆಲಸ ಮಾಡಲು ಯೋಜಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ಬಹುಮತಕ್ಕೆ 32 ಸ್ಥಾನಗಳನ್ನು ಕಳೆದುಕೊಂಡಿದೆ. 16 ಸ್ಥಾನಗಳನ್ನು ಗೆದ್ದಿರುವ ಎನ್ ಚಂದ್ರಬಾಬು ನಾಯ್ಡು ಅವರ ಟಿಡಿಪಿ, ನಿತೀಶ್ ಕುಮಾರ್ ಅವರ ಜೆಡಿಯು (12), ಏಕನಾಥ್ ಶಿಂಧೆ ಅವರ ಶಿವಸೇನೆ (7) ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್ (7) ಬಿಜೆಪಿ ಬಹುಮತ ತಲುಪಲು ಪ್ರಮುಖ ಪಾತ್ರ ವಹಿಸಿವೆ. ಈ ನಿರ್ಣಾಯಕ ಘಟ್ಟದಲ್ಲಿ ಕಿಂಗ್‌ಮೇಕರ್‌ಗಳಾಗಿ ಹೊರಹೊಮ್ಮಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಪ್ರಧಾನಿ ಮೋದಿಗೆ ಲಿಖಿತ ಬೆಂಬಲವನ್ನು ನೀಡಿವೆ.