ನವದೆಹಲಿ: ಭಾರತದ ಬಿಷ್ಣೋಯ್ ಕ್ರೈಂ ಗ್ಯಾಂಗ್ ಹತ್ಯೆಗಳು ಮತ್ತು ಸುಲಿಗೆ ಪ್ರಕರಣಗಳ ಮೂಲಕ ಕುಖ್ಯಾತಿ ಹೊಂದಿದ್ದು, ಇದೀಗ ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಯ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ನಂತರ ಅದರ ವ್ಯಾಪ್ತಿಯು ಜಗತ್ತಿಗೇ ಹೆಚ್ಚು ವಿಸ್ತರಿಸಿದೆ.
ಈ ಗ್ಯಾಂಗ್ ನ ಆಪಾದಿತ ಮುಖ್ಯಸ್ಥ 31 ವರ್ಷದ ಕಾನೂನು ಪದವೀಧರ ಲಾರೆನ್ಸ್ ಬಿಷ್ಣೋಯ್ ಸುಮಾರು ಒಂದು ದಶಕದಿಂದ ಜೈಲಿನಲ್ಲಿದ್ದು, ಪ್ರಸ್ತುತ ಭಾರತದ ಗುಜರಾತ್ ರಾಜ್ಯದಲ್ಲಿ ಪಾಕಿಸ್ತಾನದಿಂದ ಹೆರಾಯಿನ್ ಕಳ್ಳಸಾಗಣೆ ಮಾಡಿದ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಈ ಬಿಷ್ಣೋಯ್ ಗ್ಯಾಂಗ್ 2022 ರಲ್ಲಿ ಜನಪ್ರಿಯ ಸಿಖ್ ರ್ಯಾಪರ್ ಹತ್ಯೆಯಲ್ಲಿ ಶಂಕಿತವಾಗಿದ್ದು, ಈ ತಿಂಗಳ ಆರಂಭದಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಉನ್ನತ ಮಟ್ಟದ ರಾಜಕಾರಣಿ ಎನ್ ಸಿಪಿ ಮುಖಂಡ ಬಾಬಾ ಸಿದ್ದಿಕಿಯನ್ನು ಕೊಂದು ಹಾಕಿದ ಬಳಿಕ ಮತ್ತಷ್ಟು ಜೋರಾಗಿ ಈ ಗ್ಯಾಂಗ್ ನ ಹೆಸರು ವ್ಯಾಪಕವಾಗಿ ಕೇಳಿಬರುತ್ತಿದೆ.
ಇದೇ ಗ್ಯಾಂಗ್ ಕೆನಡಾ ಪ್ರಜೆ ಹಾಗೂ ಖಲಿಸ್ತಾನಿ ಬಂಡುಕೋರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲೂ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸ್ವತಃ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಗಂಭೀರ ಆರೋಪ ಮಾಡಿದ್ದಾರೆ. ಈ ಹತ್ಯೆಗೆ ಸಂಬಂಧಿಸಿದಂತೆ ತಮ್ಮ ಬಳಿ ಗಂಭೀರ ಪುರಾವೆಗಳಿದ್ದು, ಬಿಷ್ಣೋಯ್ ಗ್ಯಾಂಗ್ ಮತ್ತು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಜಂಟಿಯಾಗಿ ಈ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಕೆನಡಾದ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸರು, 'ಭಾರತವು ದಕ್ಷಿಣ ಏಷ್ಯಾದ ವಲಸೆಗಾರರನ್ನು ಮತ್ತು ಸಿಖ್ ಪ್ರತ್ಯೇಕತಾವಾದಿಗಳ ಸದಸ್ಯರನ್ನು ಗುರಿಯಾಗಿಸಲು "ಸಂಘಟಿತ ಅಪರಾಧ ಅಂಶಗಳನ್ನು" ಬಳಸುತ್ತಿದ್ದು, ಇದಕ್ಕೆ "ಬಿಷ್ಣೋಯ್ ಗ್ಯಾಂಗ್" ಉದಾಹರಣೆ ಎಂದು ಆರೋಪಿಸಿದೆ. ಈ ಗುಂಪು ಭಾರತ ಸರ್ಕಾರದ ಏಜೆಂಟರೊಂದಿಗೆ ಸಂಪರ್ಕ ಹೊಂದಿದೆ ಎಂದು ನಾವು ನಂಬುತ್ತೇವೆ ಎಂದು ಆರ್‌ಸಿಎಂಪಿ ಸಹಾಯಕ ಆಯುಕ್ತ ಬ್ರಿಗಿಟ್ಟೆ ಗೌವಿನ್ ಸುದ್ದಿಗಾರರಿಗೆ ತಿಳಿಸಿದರು.
ಖಲಿಸ್ತಾನಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ರನ್ನು ಜೂನ್ 2023ರಲ್ಲಿ ವ್ಯಾಂಕೋವರ್‌ನಲ್ಲಿರುವ ಅವರ ಮನೆಯ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಸರ್ಕಾರವು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳನ್ನೂ ಆರೋಪಿಗಳನ್ನಾಗಿ ಮಾಡಿತ್ತು. ಆದರೆ ಕೆನಡಾ ಸರ್ಕಾರದ ಆರೋಪಗಳನ್ನು ಭಾರತ ಸರ್ಕಾರ ತಳ್ಳಿ ಹಾಕಿತ್ತು. ಮಾತ್ರವಲ್ಲದೇ ಕೆನಡಾ ಸರ್ಕಾರದ ವಿರುದ್ಧ ಕಿಡಿಕಾರಿತ್ತು.
ಕೆನಡಾ ಆರೋಪವನ್ನು ತಳ್ಳಿಹಾಕಿದ್ದ ಭಾರತ "ರಾಜಕೀಯ ಲಾಭಕ್ಕಾಗಿ ಭಾರತಕ್ಕೆ ಮಸಿ ಬಳಿಯುವ ಯತ್ನ ಎಂದು ಕಿಡಿಕಾರಿತ್ತು. ಪರಸ್ಪರ ಆರೋಪ-ಪ್ರತಿ ಆರೋಪಗಳ ಹಿನ್ನಲೆಯಲ್ಲಿ ಉಭಯದೇಶಗಳಲ್ಲಿನ ರಾಯಭಾರಿ ಕಚೇರಿ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ಅಂತೆಯೇ ನಿಜ್ಚರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಪೊಲೀಸರು5 ಮಂದಿ ಶಂಕಿತರನ್ನು ಬಂಧಿಸಿದ್ದರು.
ಬಿಷ್ಣೋಯ್ ವಿರುದ್ಧ ಹಲವು ಪ್ರಕರಣಗಳು
ನಿಜ್ಜರ್ 1997 ರಲ್ಲಿ ಕೆನಡಾಕ್ಕೆ ವಲಸೆ ಬಂದಿದ್ದು, 2015 ರಲ್ಲಿ ಕೆನಡಾ ನಾಗರಿಕರಾದರು. ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಗ್ಯಾಂಗ್ ವಿರುದ್ಧ ಭಯೋತ್ಪಾದನೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಭಾರತೀಯ ಅಧಿಕಾರಿಗಳಿಗೆ ಆತ ಬೇಕಾಗಿದ್ದ. ರೈತನ ಮಗನಾದ ಲಾರೆನ್ಸ್ 2010 ರಲ್ಲಿ ಸಂಘಟಿತ ಅಪರಾಧಕ್ಕೆ ಕಾಲಿಟ್ಟಾಗ ಇನ್ನೂ ಹದಿಹರೆಯದವನಾಗಿದ್ದನು. ಪೊಲೀಸ್ ದಾಖಲೆಯ ಪ್ರಕಾರ ವಿದ್ಯಾರ್ಥಿ ರಾಜಕೀಯದಲ್ಲಿ ತೊಡಗಿಸಿಕೊಂಡಾಗ ಪ್ರತಿಸ್ಪರ್ಧಿಗಳನ್ನು ಬೆದರಿಸುವುದು ಸೇರಿದಂತೆ ಹಲವು ಕಾನೂನು ವಿರೋಧಿ ಚಟುವಟಿಕೆಗಳನ್ನು ಮಾಡತೊಡಗಿದ. ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಯತ್ನದ ಎರಡು ಪ್ರಕರಣಗಳು, ಮಾದಕವಸ್ತು ಕಳ್ಳಸಾಗಣೆ ಮತ್ತು ಬಂದೂಕುಗಳನ್ನು ಸಾಗಿಸುವುದು ಸೇರಿದಂತೆ ಆರು ಆರೋಪಗಳ ಮೇಲೆ 2019 ರಲ್ಲಿ ಬಿಷ್ಣೋಯ್ ಅವರಿಗೆ ಐದು ವರ್ಷಗಳ ಹಿಂದೆ ಶಿಕ್ಷೆ ವಿಧಿಸಲಾಯಿತು.
2022 ರಲ್ಲಿ ಪಂಜಾಬ್‌ನಲ್ಲಿ ಸಿಧು ಮೂಸೆವಾಲಾ ಪ್ರದರ್ಶನ ನೀಡುತ್ತಿದ್ದ ವೇಳೆ ಅವರನ್ನು ಗುಂಡಿಕ್ಕಿ ಕೊಂದಾಗ ಈ ಗ್ಯಾಂಗ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಕೆನಡಾ ಮೂಲದ ಗೋಲ್ಡಿ ಬ್ರಾರ್ ಗ್ಯಾಂಗ್ ಭಾರತದಿಂದ "ಭಯೋತ್ಪಾದಕ" ಎಂದು ಗೊತ್ತುಪಡಿಸಿದ ಸತೀಂದರ್ಜಿತ್ ಸಿಂಗ್ ವಿರುದ್ಧ "ಸೇಡು ತೀರಿಸಿಕೊಳ್ಳಲು ಈ ಹತ್ಯೆಯನ್ನು ತಾನೇ ಮಾಡಿದ್ದಾಗಿ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿತ್ತು.
ಬಿಷ್ಣೋಯ್ ಪಂಥದ ಪ್ರತಿನಿಧಿಗಳೆಂದು ಹೇಳಿಕೊಳ್ಳುವ ಗ್ಯಾಂಗ್
ಈ ಗ್ಯಾಂಗ್ ರಾಜಸ್ಥಾನದ ಮರುಭೂಮಿಯ ಬಿಷ್ಣೋಯ್ ಹಿಂದೂ ಪಂಥದ ಪ್ರತಿನಿಧಿಗಳು ಎಂದು ಹೇಳಿಕೊಳ್ಳುತ್ತದೆ. ಅಂತೆಯೇ ಇದೇ ಬಿಷ್ಣೋಯ್ ಸಮುದಾಯವು ತಮ್ಮ ಗುರುವಿನ ಪುನರ್ಜನ್ಮ ಎಂದು ಕೃಷ್ಣಮೃಗಗಳನ್ನು ಪರಿಗಣಿಸುತ್ತದೆ.
ಇದೇ ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪದ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧವೂ ಈ ಗ್ಯಾಂಗ್ ಸೇಡಿತೀರಿಸಿಕೊಳ್ಳುವ ತವಕದಲ್ಲಿದೆ. ಇದರ ಹಂತವಾಗಿಯೇ ಈ ಹಿಂದೆ ಸಲ್ಮಾನ್ ಖಾನ್ ಆಪ್ತರಾಗಿದ್ದ ಎನ್ ಸಿಪಿ ನಾಯಕ ಬಾಬಾ ಸಿದ್ದಿಕಿಯನ್ನು ಕೊಂದಿರುವುದಾಗಿ ಹೇಳಿಕೊಂಡಿದೆ.
ಅಲ್ಲದೆ ಮುಂಬೈನಲ್ಲಿರುವ ಸಲ್ಮಾನ್ ಖಾನ್ ಮನೆ ಮೇಲೂ ಈ ಗ್ಯಾಂಗ್ ಗುಂಡಿನ ದಾಳಿ ಮಾಡಿ ಭಾರಿ ಸದ್ದು ಮಾಡಿತ್ತು. ಸಲ್ಮಾನ ಮೇನೆ ಮೇಲಿ ಗುಂಡು ಹಾರಿಸಿದ ಆರೋಪದ ಮೇರೆಗೆ ಮುಂಬೈ ಪೊಲೀಸರು ಏಪ್ರಿಲ್‌ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.