ಚೆನ್ನೈ: ತಮಿಳುನಾಡು ಪೊಲೀಸರ ಸೈಬರ್ ಕ್ರೈಂ ವಿಭಾಗ ಮಹತ್ವದ ಬೆಳವಣಿಗೆಯೊಂದರಲ್ಲಿ ‘ಫೆಡ್‌ಎಕ್ಸ್’ ಹಗರಣದ ಕಿಂಗ್‌ಪಿನ್ ಬಾಂಗ್ಲಾದೇಶದಲ್ಲಿ ಇರುವುದನ್ನು ಪತ್ತೆ ಹಚ್ಚಿರುವುದಾಗಿ ಶುಕ್ರವಾರ ಅಧಿಕೃತ ಪ್ರಕಟಣೆ ತಿಳಿಸಿದೆ. ಆದಾಗ್ಯೂ, ಈ ಕಿಂಗ್‌ಪಿನ್‌ನ ಗುರುತನ್ನು ಪೊಲೀಸರು ಬಹಿರಂಗಪಡಿಸಿದ್ದಾರೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಇತ್ತೀಚೆಗೆ ಚೆನ್ನೈ ನಿವಾಸಿಯೊಬ್ಬರು 1.18 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣದ ತನಿಖೆಯ ವೇಳೆ ಇದು ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರ ಮತ್ತು ಗುಜರಾತ್‌ನ ಏಳು ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ವಿಚಾರಣೆ ಆಧಾರದ ಮೇಲೆ, ತಮಿಳುನಾಡು ಪೊಲೀಸರು ಬಾಂಗ್ಲಾದೇಶದ ಢಾಕಾದಲ್ಲಿ ಕಿಂಗ್‌ಪಿನ್ ನಿರ್ವಹಿಸುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ. ಅವರು ಭಾರತದಲ್ಲಿನ ಏಜೆಂಟ್‌ಗಳೊಂದಿಗೆ ಸಮನ್ವಯದೊಂದಿಗೆ ಜನರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ.
ಆಗಸ್ಟ್‌ನಲ್ಲಿ ನಡೆದ ನಕಲಿ ಕ್ರಿಮಿನಲ್ ತನಿಖೆಯಲ್ಲಿ ನಿರಪರಾಧಿ ಎಂದು ಸಾಬೀತುಪಡಿಸುವ ನೆಪದಲ್ಲಿ ಸಂತ್ರಸ್ತನಿಂದ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಿಸಿಕೊಳ್ಳಲು ಫೆಡೆಕ್ಸ್ ಎಕ್ಸಿಕ್ಯೂಟಿವ್ ಮತ್ತು ಸೈಬರ್ ಕ್ರೈಮ್ ಅಧಿಕಾರಿಗಳಂತೆ ನಟಿಸಿದ ಆರೋಪಿಗಳು ಚೆನ್ನೈ ನಿವಾಸಿಯನ್ನು ವಂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಆಕೆಯ ಹೆಸರಿನಲ್ಲಿರುವ ಪಾರ್ಸೆಲ್‌ನಲ್ಲಿ ನಿಷೇಧಿತ ಸರಕುಗಳಿದ್ದು, ಅದರಿಂದ ಬಚಾವ್ ಆಗಲು ಸೈಬರ್ ಕ್ರೈಮ್ ಅಧಿಕಾರಿಗೆ ಹಣ ನೀಡುವಂತೆ ಹೇಳಿ 1.18 ಕೋಟಿ ರೂ. ವರ್ಗಾಯಿಸಿಕೊಂಡಿದ್ದರು. ಆಕೆ ದೂರು ದಾಖಲಿಸಿದ ನಂತರ ಸೈಬರ್ ಅಪರಾಧ ವಿಭಾಗದ ಪೊಲೀಸರು ತನಿಖೆ ಕೈಗೊಂಡಿದ್ದರು. ಇದು ಮೂವರು ಆರೋಪಿಗಳನ್ನು ಬಂಧಿಸಲು ಕಾರಣವಾಗಿದೆ.
ವಿಚಾರಣೆ ಕೈಗೊಂಡ ಪೊಲೀಸರು ಸೈಬರ್ ಕ್ರಿಮಿನಲ್ ಗಳು ಮತ್ತು ಏಜೆಂಟರ ನಡುವೆ ಮಧ್ಯವರ್ತಿಯಾಗಿದ್ದ ವಿಫುಲ್ ಬಾಗುಬಾಯಿ ಕೊವಾಡಿಯಾ ಎಂಬಾತನನ್ನು ಗುಜರಾತ್ ನ ಭುಜ್ ನಲ್ಲಿ ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಮತ್ತಿಬ್ಬರು ಏಜೆಂಟ್‌ಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರುಬಾಂಗ್ಲಾದೇಶದ ಢಾಕಾದಲ್ಲಿ ಪ್ರಮುಖ ಆರೋಪಿಗಳ ಸಂಪರ್ಕವನ್ನು ಹೊಂದಿರುತ್ತಾರೆ ಎಂದು ವಿಪುಲ್ ಬಹಿರಂಗಪಡಿಸಿದ್ದಾನೆ. ನಂತರ ಸೈಬರ್ ಕ್ರೈಂ ವಿಭಾಗ ಮಹಾರಾಷ್ಟ್ರದ ಸೋಲಾಪುರದ ಸಾಹಿಲ್ ಖುದ್ಬುದ್ದೀನ್ ಅತ್ತಾರ್ (24) ಮತ್ತು ಮಹಾರಾಷ್ಟ್ರದ ಕುರ್ದುವಾಡಿಯ ಶಾರುಖ್ ಇಬ್ರಾಹಿಂ ಶೇಖ್ (27) ಅವರನ್ನು ಬಂಧಿಸಿದೆ.
ಬಾಂಗ್ಲಾದೇಶದ ಢಾಕಾದಲ್ಲಿರುವ ಕಿಂಗ್‌ಪಿನ್‌ನ ಸೂಚನೆಗಳ ಮೇರೆಗೆ ಈ ಜಾಲ ಕಾರ್ಯನಿರ್ವಹಿಸುತಿತ್ತು ಎಂಬುದನ್ನು ತನಿಖೆಯು ಬಹಿರಂಗಪಡಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.