ಗುರುಗ್ರಾಮ: ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಗುರುಗ್ರಾಮದ ಸೆಕ್ಟರ್ 57 ರಲ್ಲಿರುವ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ನಿವಾಸದ ಮೇಲೆ ಇಂದು ಬೆಳಗಿನ ಜಾವ 5.30 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಘಟನೆ ವೇಳೆ ಎಲ್ವಿಶ್ ಯಾದವ್ ಅವರು ಮನೆಯಲ್ಲಿರಲಿಲ್ಲ ಎನ್ನಲಾಗುತ್ತಿದ್ದು, ಕೆಲವು ಕುಟುಂಬ ಸದಸ್ಯರು ಒಳಗೆ ಇದ್ದರು. ಆದರೆ, ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಕುಟುಂಬದಿಂದ ಔಪಚಾರಿಕ ದೂರು ದಾಖಲಾದ ನಂತರ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು “ಘಟನೆಗೂ ಮುನ್ನ ಎಲ್ವಿಶ್‌ಗೆ ಯಾವುದೇ ಬೆದರಿಕೆಗಳು ಬಂದಿಲ್ಲ. ನಾವು ಮಲಗಿದ್ದಾಗ ದಾಳಿಕೋರರು ಬೈಕ್‌ನಲ್ಲಿ ಬಂದು ಗುಂಡು ಹಾರಿಸಲು ಪ್ರಾರಂಭಿಸಿದರು. ಮೂವರು ಮುಸುಕುಧಾರಿಗಳು ಇದ್ದರು. ಒಬ್ಬರು ಬೈಕ್‌ನಲ್ಲಿ ಕುಳಿತಿದ್ದರು. ಉಳಿದ ಇಬ್ಬರು ಕೆಳಗೆ ಇಳಿದು ಮನೆಯ ಮೇಲೆ ಗುಂಡು ಹಾರಿಸಿದರು. ಸುಮಾರು 25 ರಿಂದ 30 ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಪ್ರಸ್ತುತ ಎಲ್ವಿಶ್ ಕೆಲಸದ ನಿಮಿತ್ತ ನಗರದಿಂದ ಹೊರಗಿದ್ದಾನೆ ಎಂದು ತಂದೆ ಹೇಳಿದ್ದಾರೆ.