ನವದೆಹಲಿ: 'ಆಪರೇಷನ್ ಸಿಂಧೂರ' ಸಮಯದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳು ಹಾಗೂ ಗುಪ್ತಚರ ಮಾಹಿತಿ ನೀಡಿದ್ದ ಚೀನಾ ಪೂರೈಸಿತ್ತು. ಇದಾದ ಕೇವಲ ಮೂರು ತಿಂಗಳಲ್ಲಿಯೇ ಇದೀಗ ಚೀನಾ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡುತ್ತಿರುವುದನ್ನು ಗುರಿಯಾಗಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.
ಗಾಲ್ವಾನ್ ವಿಚಾರದಲ್ಲಿ ಚೀನಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕ್ಲೀನ್ ಚಿಟ್‌ಗೆ ಭಾರತ ಬೆಲೆ ನೀಡಿದೆ. ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ 20 ಭಾರತೀಯ ಸೈನಿಕರ ಹುತಾತ್ಮತೆಗೆ ಇದು ಅವಮಾನವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಮೂರು ತಿಂಗಳ ಹಿಂದೆ ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನಕ್ಕೆ ಸಂಪೂರ್ಣ ಮಿಲಿಟರಿ ಬೆಂಬಲವನ್ನು ನೀಡಿದ್ದ ಚೀನಾ ಜೆ-10 ಸಿ ಫೈಟರ್ ಮತ್ತು ಪಿಎಲ್ -15 ಏರ್-ಟು-ಏರ್ ಕ್ಷಿಪಣಿ ಮತ್ತು ವಿವಿಧ ಕ್ಷಿಪಣಿಗಳು ಮತ್ತು ಡ್ರೋನ್‌ಗಳಂತಹ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಜುಲೈ 4, 2025 ರಂದು ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಹೋರಾಡುತ್ತಿದ್ದ ವಿರೋಧಿಗಳಲ್ಲಿ" ಚೀನಾ ಕೂಡ ಒಂದಾಗಿತ್ತು. ನೇರವಾಗಿ ಗುಪ್ತಚರ ಮಾಹಿತಿಗಳನ್ನು ಒದಗಿಸುತಿತ್ತು ಎಂದು ಸೇನಾ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಹೇಳಿದ್ದಾರೆ.
ಅಲ್ಲದೇ ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಯಾರ್ಲುಂಗ್ ತ್ಸಾಂಗ್ಪೋ ನದಿ ಮೇಲೆ 60 ಮೆಗಾ ವ್ಯಾಟ್ ಸಾಮರ್ಥ್ಯದ ಮೆಗಾ ಅಣೆಕಟ್ಟು ನಿರ್ಮಾಣವನ್ನು ಆರಂಭ ಸೇರಿದಂತೆ ಮತ್ತಿತರ ಕಾರಣಗಳನ್ನು ನೀಡಿದ್ದಾರೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಸೋಮವಾರದಿಂದ ಎರಡು ದಿನಗಳ ಭಾರತ ಭೇಟಿ ನೀಡುತ್ತಿದ್ದು, ಈ ವೇಳೆ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.
ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಅವರ ಚೀನಾ ಪ್ರವಾಸಕ್ಕೆ ಕೆಲವು ದಿನಗಳ ಮೊದಲು ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ.