ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನೇತೃತ್ವದ ರ್ಯಾಲಿಯಲ್ಲಿ ಪಾಲ್ಗೊಂಡಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಗೆ ಎನ್ ಡಿಎ ಮೈತ್ರಿಕೂಟ ಸವಾಲೆಸೆದಿದ್ದು, 'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?' ಎಂದು ಸವಾಲೆಸೆದಿದೆ.
ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಪ್ರಚಾರ ಜೋರಾಗಿದೆ. ಬಿಜೆಪಿ ವಿರುದ್ಧ ಮತಗಳ್ಳತನದ ಆರೋಪ ಮಾಡಿರುವ ರಾಹುಲ್ ಗಾಂಧಿ, ಈಗ ವೋಟರ್ ಅಧಿಕಾರ ಯಾತ್ರೆ ನಡೆಸುತ್ತಿದ್ದಾರೆ.
INDIA ಮೈತ್ರಿಕೂಟದ ಪಾಲುದಾರ ಪಕ್ಷವಾಗಿರುವ ಡಿಎಂಕೆ ಪರವಾಗಿ ರಾಹುಲ್ ಗಾಂಧಿ ಅವರ 'ಮತದಾರರ ಅಧಿಕಾರ ಯಾತ್ರೆ'ಗೆ ಸ್ಟಾಲಿನ್ ಬೆಂಬಲ ಘೋಷಿಸಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್ ಅವರ ಬಿಹಾರ ಭೇಟಿ ಇದೀಗ ರಾಜಕೀಯ ಟೀಕೆಗೆ ಗುರಿಯಾಗಿದೆ.
ಬಿಜೆಪಿ-ಜೆಡಿಯು ಟೀಕೆ
ಸ್ಟಾಲಿನ್ ಬಿಹಾರ ಭೇಟಿಗೆ ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ ಕಿಡಿಕಾರಿದ್ದು, ರಾಹುಲ್ ಗಾಂಧಿ ವಿರುದ್ಧ ವಾಕ್ಸಮರ ನಡೆಸಿವೆ.
'ಅವರು ಒಂದು ಕಾಲದಲ್ಲಿ ಯಾರು ಬಿಹಾರಿಗಳನ್ನು ಅವಮಾನಿಸಿದ್ದರೋ, ಸನಾತನ ಧರ್ಮವನ್ನು ಅಣಕಿಸಿದ್ದರೋ ಅವರನ್ನೇ ರಾಹುಲ್ ಗಾಂಧಿ ಈಗ ಮತಗಳಿಗಾಗಿ ಬಿಹಾರಕ್ಕೆ ಕರೆತಂದು ಮತ ಯಾಚನೆ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.
ಹಿಂದೆ ಡಿಎಂಕೆ ನಾಯಕರು ಮಾಡಿದ ಬಿಹಾರಿ ವಿರೋಧಿ ಕಾಮೆಂಟ್‌ಗಳು ಮತ್ತು ಸನಾತನ ಧರ್ಮ ವಿರೋಧಿ ಕಾಮೆಂಟ್‌ಗಳನ್ನು ಉಲ್ಲೇಖಿಸಿ ಬಿಜೆಪಿ ಸ್ಟಾಲಿನ್‌ಗೆ ಸವಾಲು ಹಾಕಿದೆ.
'ಧಮ್ ಇದ್ರೆ.. ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?'
ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ.. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೈಗೊಂಡಿರುವ 'ಮತದಾರ ಅಧಿಕಾರ ಯಾತ್ರೆ'ಯಲ್ಲಿ ಭಾಗವಹಿಸಲು ಸ್ಟಾಲಿನ್ ಬಿಹಾರ ತಲುಪಿದ್ದಾರೆ. ಇದೇ ಸಮಯದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆಗೆ ಸವಾಲೆಸೆದಿರುವ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ 'ಧಮ್ ಇದ್ರೆ.. ಈ ಹಿಂದೆ ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?' ಎಂದು ಸವಾಲೆಸೆದಿದೆ.
ಬಿಜೆಪಿ ತಮಿಳುನಾಡು ರಾಜ್ಯ ವಕ್ತಾರ ನಾರಾಯಣನ್ ತಿರುಪತಿ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದಾರೆ. 'ನೀವು ಬಾಯಿ ತೆರೆದರೆ, ನಿಮ್ಮನ್ನು ನೈತಿಕತೆ ಮತ್ತು ಸ್ವಾಭಿಮಾನಕ್ಕಾಗಿ ನಿಲ್ಲುವ ವ್ಯಕ್ತಿ ಎಂದು ಕರೆದುಕೊಳ್ಳುತ್ತೀರಿ. ಸರಿ? ದ್ರಾವಿಡ ಸಿಂಹ ಎಂದು ಕರೆದುಕೊಳ್ಳುತ್ತೀರಿ. ಅದು ನಿಜವಾಗಿದ್ದರೆ.. ನಿಮ್ಮ ಪಕ್ಷದ ಸದಸ್ಯರು ಹಿಂದೆ ಸನಾತನ ಧರ್ಮ ಮತ್ತು ಬಿಹಾರದ ಕುರಿತ ನೀಡಿದ್ದ ಹೇಳಿಕೆಯನ್ನು ಇನ್ನೊಮ್ಮೆ ಇಲ್ಲಿ ಹೇಳಿ ನೋಡೋಣ ಎಂದು ಅವರು ಸವಾಲು ಹಾಕಿದ್ದಾರೆ.
ಏನದು ಹೇಳಿಕೆ?
ಎರಡು ವರ್ಷಗಳ ಹಿಂದೆ.. ಸಾರ್ವಜನಿಕ ಸಭೆಯಲ್ಲಿ, ಎಂಕೆ ಸ್ಟಾಲಿನ್ ಪುತ್ರ, ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದರು.. ಅದನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳು ಭಾರಿ ಕೋಲಾಹಲ ಸೃಷ್ಟಿಸಿದ್ದವು. ಬಿಹಾರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಜೂನಿಯರ್ ಸ್ಟಾಲಿನ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ವಿಷಯವು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.
ಬಿಹಾರಿಗಳ ಕುರಿತು ಮಾರನ್ ಹೇಳಿಕೆ!
ಅಂತೆಯೇ ಡಿಎಂಕೆಯ ದಯಾನಿಧಿ ಮಾರನ್ ಅವರು ಬಿಹಾರಿಗಳನ್ನು ಅವಹೇಳನಕಾರಿಯಾಗಿ ಮಾಡಿದ ಹೇಳಿಕೆಗಳನ್ನು ಬಿಜೆಪಿ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದೆ. ಬಿಹಾರಿಗಳು.. ಅಶ್ಲೀಲರು. ಅಜ್ಞಾನಿಗಳು. ಅವರು ಪಾನಿಪುರಿ ಮಾರಾಟ ಮತ್ತು ಶೌಚಾಲಯಗಳ ನಿರ್ವಹಣೆ ಮಾಡುತ್ತಾ ಹಣ ಸಂಪಾದಿಸುತ್ತಾರೆ. ಇದಕ್ಕಾಗಿಯೇ ತಮಿಳುನಾಡಿಗೆ ಬರುತ್ತಾರೆ ಎಂದು ಮಾರನ್ ಹೇಳಿದ್ದರು ಎಂದು ಬಿಜೆಪಿ ಹೇಳಿದ್ದು, ಈಗ ನಿಮಗೆ ಧೈರ್ಯವಿದ್ದರೆ ಆ ಹೇಳಿಕೆಗಳನ್ನ ಬಿಹಾರದಲ್ಲಿ ಪುನರುಚ್ಛರಿಸಿ ಎಂದು ಸವಾಲೆಸೆದಿದ್ದಾರೆ.
ತಿರುಪತಿ ಮಾತ್ರವಲ್ಲ, ಬಿಜೆಪಿ ನಾಯಕ ಅಣ್ಣಾಮಲೈ ಕೂಡ ಆ ಹೇಳಿಕೆಗಳನ್ನು ಉಲ್ಲೇಖಿಸಿದ್ದು, ಸ್ಟಾಲಿನ್ ಬಿಹಾರ ವೇದಿಕೆಯಲ್ಲಿ ಅವುಗಳನ್ನು ಪುನರಾವರ್ತಿಸಬೇಕು ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಹಾರದ ಜೆಡಿಯು ನಾಯಕ ಅಭಿಷೇಕ್ ಝಾ ಕೂಡ ಸ್ಟಾಲಿನ್ ಭೇಟಿಯನ್ನು ಟೀಕಿಸಿ, "ತೇಜಸ್ವಿ ಯಾದವ್ ಅವರು ಬಿಹಾರದ ಜನರ ಬೆಂಬಲವನ್ನು ಅಂತಹ ಜನರಿಂದ ನಿರೀಕ್ಷಿಸುವುದು ಮೈನಸ್ ಆಗುತ್ತದೆ" ಎಂದು ಹೇಳಿದರು.
ಚುನಾವಣೆಗಳ ಅಣಕ: ಸ್ಟಾಲಿನ್
ಮುಜಾಫರ್ಪುರ್ನಲ್ಲಿ ನಡೆದ ವೋಟರ್ ಅಧಿಕಾರ ರ್ಯಾಲಿಯನ್ನು ಉದ್ದೇಶಿಸಿದ ಮಾತನಾಡಿದ ಸ್ಟಾಲಿನ್, 'ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯು ಭಯೋತ್ಪಾದನೆಗಿಂತ ಅಪಾಯಕಾರಿ ಎಂದು ಟೀಕಿಸಿದರು. ಬಿಜೆಪಿಯು ಚುನಾವಣೆಗಳನ್ನು ಅಣಕಿಸುತ್ತಿದೆ. ಮತಗಳ್ಳತನದಿಂದ ಅಧಿಕಾರ ಪಡೆದಿರುವ ಬಿಜೆಪಿ ಸರ್ಕಾರವನ್ನು ಜನರು ಕಿತ್ತೊಗೆಯಲಿದ್ದಾರೆ. ಚುನಾವಣಾ ಆಯೋಗವನ್ನು ಬಿಜೆಪಿ ಕೈಗೊಂಬೆಯಂತೆ ಮಾಡಿಕೊಂಡಿದೆ. 65 ಲಕ್ಷ ಮತದಾರರನ್ನು ವೋಟಿಂಗ್ ಲಿಸ್ಟ್ನಿಂದ ಡಿಲಿಟ್ ಮಾಡಿರುವುದು ಭಯೋತ್ಪಾದನೆಗಿಂತ ಅಪಾಯಕಾರಿ ಎಂದು ಹೇಳಿದ್ದಾರೆ.