ನವದೆಹಲಿ: 2 ದಿನಗಳ ಭಾರತ ಪ್ರವಾಸಕ್ಕೆ ದೆಹಲಿಗೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಿಷ್ಠಾಚಾರ ಬದಿಗಿಟ್ಟು ಪ್ರಧಾನಿ ಮೋದಿ ಜೊತೆ ಸಾಮಾನ್ಯ ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸಿದ ಘಟನೆ ನಡೆದಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೆಹಲಿಗೆ ಬಂದಿಳಿದಿದ್ದು, ಪ್ರಧಾನಿ ನರೇಂದ್ರ ಮೋದಿ ಪುಟಿನ್ ಅವರನ್ನು ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದು ಹಸ್ತಲಾಘವ ಮತ್ತು ಅಪ್ಪುಗೆ ಮೂಲಕ ಪುಟಿನ್ ಅವರನ್ನು ಸ್ವಾಗತಿಸಿದ ಮೋದಿ ಬಳಿಕ ಏರ್ಪೋರ್ಟ್ನಿಂದ ಹೊರಟರು. ಈ ವೇಳೆ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದ್ದು ವಿಶೇಷವಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೆಹಲಿಯ ವಿಮಾನ ನಿಲ್ದಾಣದಿಂದ ಹೊರಬರುವಾಗ ಒಂದೇ ಅಧಿಕೃತ ಕಾರಿನಲ್ಲಿ ಪ್ರಯಾಣಿಸಿದರು. ಟೊಯೋಟಾ ಸಂಸ್ಥೆಯ ಫಾರ್ಚುನರ್ ಕಾರಿನಲ್ಲಿ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಪ್ರಯಾಣಿಸಿದರು.
ಇದು ಭಾರತ ಮತ್ತು ರಷ್ಯಾ ನಡುವಿನ ಆಪ್ತತೆ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ನರೇಂದ್ರ ಮೋದಿ ಜೊತೆ ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದಾರೆ.
ಒಂದೇ ಕಾರಿನಲ್ಲಿ ಪ್ರಯಾಣ ಇದೇ ಮೊದಲೇನಲ್ಲ
ಸೆಪ್ಟೆಂಬರ್ 2025 ರಲ್ಲಿ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸ್ಥಳದಲ್ಲಿ ನಡೆದ ಪ್ರಕ್ರಿಯೆಗಳ ನಂತರ ಪ್ರಧಾನಿ ಮೋದಿ ಮತ್ತು ಪುಟಿನ್ ತಮ್ಮ ದ್ವಿಪಕ್ಷೀಯ ಸಭೆಯ ಗಮ್ಯಸ್ಥಾನಕ್ಕೆ ಒಂದೇ ವಾಹನದಲ್ಲಿ ಪ್ರಯಾಣಿಸಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕೋ ಜೊತೆಗಿನ ದೆಹಲಿಯ ತೈಲ ವ್ಯಾಪಾರದ ವಿರುದ್ಧ ಸುಂಕ ಸಮರ ಘೋಷಿಸಿರುವ ಸಮಯದಲ್ಲಿ SCO ಸಭೆಯಲ್ಲಿ ಒಟ್ಟಿಗೆ ಕಾರು ಸವಾರಿ ಮಾಡುವ ಮೂಲಕ ಉಭಯ ನಾಯಕರು ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಿದ್ದರು.
ಅಂದು ಕೂಡ ವ್ಲಾಡಿಮಿರ್ ಪುಟಿನ್ ಪ್ರೋಟೋಕಾಲ್ ಬದಿಗೊತ್ತಿ ಮೋದಿ ತಮ್ಮ ಅತ್ಯಂತ ಸುರಕ್ಷಿತ ಕಾರಿನಲ್ಲಿ (armoured car) ಪ್ರಯಾಣಿಸುವಂತೆ ಒತ್ತಾಯಿಸಿದ್ದರು. ಬಳಿಕ ಪುಟಿನ್ 45 ನಿಮಿಷಗಳ ಕಾಲ ಮೋದಿ ಅವರೊಂದಿಗೆ ಇದ್ದರು ಎನ್ನಲಾಗಿದೆ.
ಅಂದು ಪ್ರಧಾನಿ ಮೋದಿ ಕಾರು ಚೀನಾದಲ್ಲಿ ಪುಟಿನ್ ಅವರ ವಾಹನವಾದ ಔರಸ್ ಸೆನಾಟ್ ಅನ್ನು ಹಿಂಬಾಲಿಸಿದರೆ, ಇಂದು ರಷ್ಯಾದ ಅಧ್ಯಕ್ಷರ ವಾಹನವು ದೆಹಲಿಯಲ್ಲಿ ಇಬ್ಬರು ನಾಯಕರು ಪ್ರಯಾಣಿಸುತ್ತಿದ್ದ ಟೊಯೋಟಾ ಫಾರ್ಚೂನರ್ ಅನ್ನು ಹಿಂಬಾಲಿಸಿತು.