ಪಾಟ್ನಾ: ತಮಗೆ ಜೀವ ಬೆದರಿಕೆ ಇದ್ದು ಕೂಡಲೇ ರಕ್ಷಣೆ ನೀಡಬೇಕು ಎಂದು ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪುತ್ರ ಹಾಗೂ ಜೆಜೆಡಿ ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಬಿಹಾರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಜನಶಕ್ತಿ ಜನತಾ ದಳ (ಜೆಜೆಡಿ) ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಪಕ್ಷದ ಉಚ್ಛಾಟಿತ ರಾಷ್ಟ್ರೀಯ ವಕ್ತಾರ ಸಂತೋಷ್ ರೇಣು ಯಾದವ್ ನನ್ನನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಮಹುವಾ ವಿಧಾನಸಭಾ ಸ್ಥಾನದಿಂದ ಚುನಾವಣೆಯಲ್ಲಿ ಸೋತ ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್, ಹೆಚ್ಚಿನ ಭದ್ರತೆಯನ್ನು ಕೋರಿ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ಸಾಮ್ರಾಟ್ ಚೌಧರಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಶನಿವಾರ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಚೌಧರಿ, "ಹೌದು, ನನಗೆ ಅವರ ಪತ್ರ ಬಂದಿದೆ... ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ" ಎಂದು ಹೇಳಿದರು.
ತೇಜ್ ಪ್ರತಾಪ್ ಯಾದವ್ ಅವರ ದೂರಿನ ಆಧಾರದ ಮೇಲೆ ಇತ್ತೀಚೆಗೆ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ ಎಂದು ಸಚಿವಾಲೆ ಪೊಲೀಸ್ ಠಾಣೆಯ ಎಸ್‌ಎಚ್‌ಒ ಗೌತಮ್ ಕುಮಾರ್ ಹೇಳಿದ್ದಾರೆ.
ಪಕ್ಷದ ಉಚ್ಛಾಟಿತ ನಾಯಕನಿಂದಲೇ ಬೆದರಿಕೆ
ಇನ್ನು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಯಾದವ್, ರೇಣು ಅವರನ್ನು ಜೆಜೆಡಿ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದ್ದರು. ಆದರೆ ನಂತರ ಅವರು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ರೇಣು ಅವರು ಉದ್ಯೋಗ ಮತ್ತು ಇತರ ಅನುಕೂಲಗಳ ಭರವಸೆ ನೀಡುವ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ಇತರರಿಂದ ಹಣ ಪಡೆದಿದ್ದಾರೆ ಎಂದು ಯಾದವ್ ಆರೋಪಿಸಿದ್ದಾರೆ. ಇದರ ನಂತರ, ಡಿಸೆಂಬರ್ 14 ರಂದು ಪಕ್ಷವು ರೇಣು ಅವರನ್ನು ಪಕ್ಷದಿಂದ ಹೊರಹಾಕಿತು. ಉಚ್ಚಾಟನೆಯ ನಂತರ, ರೇಣು ಅವರನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಿಂದಿಸಲು ಮತ್ತು ಕೊಲೆ ಬೆದರಿಕೆ ಹಾಕಲು ಪ್ರಾರಂಭಿಸಿದರು ಎಂದು ಮಾಜಿ ಸಚಿವ ತೇಜ್ ಪ್ರತಾಪ್ ತಮ್ಮ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಪದೇ ಪದೇ ಪ್ರಯತ್ನಿಸಿದರೂ, ರೇಣು ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.