ಮುಂಬೈ: 2019 ಮತ್ತು 2024 ರ ವಿಧಾನಸಭಾ ಚುನಾವಣೆಗಳ ನಡುವೆ ತಮ್ಮ ಆಸ್ತಿಯಲ್ಲಿನ ಹೆಚ್ಚಳದ ಬಗ್ಗೆ ವಿವರಣೆ ಕೋರಿ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ ಎಂದು ಮಹಾರಾಷ್ಟ್ರ ಸಾಮಾಜಿಕ ನ್ಯಾಯ ಸಚಿವ ಸಂಜಯ್ ಶಿರ್ಸಾತ್ ಗುರುವಾರ ಹೇಳಿದ್ದಾರೆ.
ಇಂದು ಶಾಸಕಾಂಗ ಸಂಕೀರ್ಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ ಔರಂಗಾಬಾದ್(ಪಶ್ಚಿಮ) ಶಾಸಕ ಶಿರ್ಸಾತ್, ಶಿಂಧೆ ಅವರ ಪುತ್ರ ಕಲ್ಯಾಣ್ ಸಂಸದ ಶ್ರೀಕಾಂತ್ ಶಿಂಧೆ ಅವರಿಗೂ ನೋಟಿಸ್ ಬಂದಿದೆ ಎಂದು ಹೇಳಿದರು.
ಆದರೆ ನಂತರ ತಮ್ಮನ್ನು ತಾವು ಸರಿಪಡಿಸಿಕೊಂಡ ಶಿರ್ಸಾತ್ ಅವರು, ಶ್ರೀಕಾಂತ್ ಶಿಂಧೆ ಅವರಿಗೆ ಯಾವುದೇ ಐಟಿ ನೋಟಿಸ್ ಬಂದಿರುವ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಉಲ್ಟಾ ಹೊಡೆದರು.
"ಕೆಲವರು ನನ್ನ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ನನಗೆ ನೋಟಿಸ್ ನೀಡಲಾಗಿದೆ. ನಾನು ಬುಧವಾರ ನೋಟಿಸ್ ಗೆ ಪ್ರತಿಕ್ರಿಯಿಸಬೇಕಿತ್ತು, ಆದರೆ ಹೆಚ್ಚಿನ ಸಮಯ ಕೇಳಿದ್ದೇನೆ ಎಂದರು.
ನಾನು ಯಾವುದೇ ತಪ್ಪು ಮಾಡಿಲ್ಲ. ನೋಟಿಸ್ ಸರಿಯಾದ ಪ್ರತಿಕ್ರಿಯೆ ನೀಡುತ್ತೇನೆ ಎಂದು ವರದಿಗಾರರಿಗೆ ಶಿರ್ಸಾತ್ ತಿಳಿಸಿದರು.
ಎರಡು ವಿಧಾನಸಭೆ ಚುನಾವಣೆಗಳ ನಡುವೆ ತಮ್ಮ ಘೋಷಿತ ಆಸ್ತಿಯಲ್ಲಿನ ಏರಿಕೆಯ ಬಗ್ಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.