ನವದೆಹಲಿ: ಯೆಮೆನ್‌ನಲ್ಲಿ ಸ್ಥಳೀಯ ಪ್ರಜೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾ ಅವರ ಮರಣದಂಡನೆಯನ್ನು ಮುಂದೂಡಲಾಗಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.
ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ 38 ವರ್ಷದ ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ಕೇಂದ್ರ ಸರ್ಕಾರವು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಕೇಂದ್ರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ನಿಮಿಷ ಅವರನ್ನು ಕರೆತರಲು 'ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ' ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ ತಿಳಿಸಿದರು.
ನಿಮಿಷ ಪ್ರಿಯಾ ಅವರು ಸುರಕ್ಷಿತವಾಗಿ ಹಿಂತಿರುಗಬೇಕೆಂದು ಸರ್ಕಾರ ಬಯಸುತ್ತದೆ. ಹೀಗಾಗಿ, ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ' ಎಂದು ಹೇಳಿದರು.
ಅರ್ಜಿದಾರರ ಪರ ಹಾಜರಾದ ವಕೀಲರು, ಮೊದಲು ನಿಮಿಷ ಪ್ರಿಯಾ ಅವರು ಕ್ಷಮಾದಾನ ಪಡೆಯಬೇಕು ಮತ್ತು ನಂತರವೇ "ಬ್ಲಡ್ ಮನಿ"ಯ ವಿಷಯ ಬರುತ್ತದೆ. ಸದ್ಯ ಮರಣದಂಡನೆಯನ್ನು ಮುಂದೂಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಪೀಠವು ಈ ಕುರಿತಾದ ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಿತು.
ಈ ಹಿಂದೆ ನಿಮಿಷ ಪ್ರಿಯಾ ಅವರಿಗೆ ಜುಲೈ 16ಕ್ಕೆ ಗಲ್ಲುಶಿಕ್ಷೆಯನ್ನು ನಿಗದಿಪಡಿಸಲಾಗಿತ್ತು. ಸದ್ಯ ಅವರು ಯೆಮೆನ್‌ನ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನರ್ಸ್ ಪ್ರಿಯಾ, 2017ರಲ್ಲಿ ತನ್ನ ಯೆಮೆನ್ ಪ್ರಜೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದರು. 2020ರಲ್ಲಿ ಪ್ರಿಯಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು ಮತ್ತು ಆಕೆಯ ಅಂತಿಮ ಮೇಲ್ಮನವಿಯನ್ನು 2023 ರಲ್ಲಿ ತಿರಸ್ಕರಿಸಲಾಯಿತು.