ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮೊದಲು ಸರ್ಕಾರ ಕರೆದಿರುವ ಸರ್ವಪಕ್ಷ ಸಭೆ ಇಂದು ಭಾನುವಾರ ನಡೆಯುತ್ತಿದ್ದು, ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಪಹಲ್ಗಾಮ್ ಭಯೋತ್ಪಾದಕ ದಾಳಿ ಸೇರಿದಂತೆ ವಿವಿಧ ವಿಷಯಗಳನ್ನು ಪ್ರತಿಪಕ್ಷಗಳು ಇಂದು ಸಭೆಯಲ್ಲಿ ಪ್ರಸ್ತಾಪಿಸಿ ಆಡಳಿತ ಪಕ್ಷದಿಂದ ವಿವರ ಕೇಳುವ ಸಾಧ್ಯತೆಯಿದೆ.
ನಾಳೆ ಆರಂಭವಾಗುವ ಮಳೆಗಾಲ ಅಧಿವೇಶನದಲ್ಲಿ ಸದನದ ಸುಗಮ ನಡವಳಿಕೆಗಾಗಿ ಸರ್ಕಾರ ವಿರೋಧ ಪಕ್ಷಗಳಿಂದ ಸಹಕಾರ ಪಡೆಯುವ ಸಾಧ್ಯತೆಯಿದೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸುತ್ತಿದ್ದು, ಸರ್ಕಾರವನ್ನು ಸಂಸದೀಯ ವ್ಯವಹಾರಗಳ ಕಿರಣ್ ರಿಜಿಜು ಮತ್ತು ಅವರ ಕಿರಿಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಪ್ರತಿನಿಧಿಸುತ್ತಿದ್ದಾರೆ.
ಕಾಂಗ್ರೆಸ್‌ನ ಗೌರವ್ ಗೊಗೊಯ್ ಮತ್ತು ಜೈರಾಮ್ ರಮೇಶ್, ಎನ್‌ಸಿಪಿ-ಶರದ್ ಪವಾರ್‌ನ ಸುಪ್ರಿಯಾ ಸುಲೆ, ಡಿಎಂಕೆಯ ಟಿ ಆರ್ ಬಾಲು ಮತ್ತು ಆರ್‌ಪಿಐ (ಎ) ನಾಯಕ ಮತ್ತು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಪಹಲ್ಗಾಮ್ ದಾಳಿಗೆ ನ್ಯಾಯ ಸಿಗದಿರುವುದು, ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ 'ಕದನ ವಿರಾಮ'ಕ್ಕೆ ಮಧ್ಯಸ್ಥಿಕೆ ವಹಿಸಲಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು ಜನರ ಮತದಾನದ ಹಕ್ಕುಗಳಿಗೆ ಬೆದರಿಕೆ ಎಂದು ವಿರೋಧ ಪಕ್ಷಗಳು ಆರೋಪಿಸಿರುವ ವಿಷಯಗಳನ್ನು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಲು ಇಂಡಿಯಾ ಮೈತ್ರಿಪಕ್ಷಗಳು ನಿರ್ಣಯಿಸಿವೆ.