ನವದೆಹಲಿ: ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂಧೂರ್' ಕುರಿತು ಸಂಸತ್ತಿನಲ್ಲಿ ಚರ್ಚೆ ಆರಂಭವಾಗಿದ್ದು, ಈ ನಡುವವಲ್ಲೇ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ನೀಡಿರುವ ಹೇಳಿಕಯೊಂದು ವಿವಾದ ಭುಗಿಲೇಳುವಂತೆ ಮಾಡಿದೆ.
ದಿ ಕ್ವಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಚಿದಂಬರಂ ಅವರು, ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರು ಪಾಕಿಸ್ತಾನದಿಂದಲೇ ಬಂದರು ಎಂದು ಏಕೆ ಭಾವಿಸುತ್ತೀರಿ, ಉಗ್ರರು ಪಾಕಿಸ್ತಾನದಿಂದಲೇ ಬಂದಿದ್ದಾರೆಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಸಂದರ್ಶನದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಆಪರೇಷನ್ ಸಿಂಧೂರ್ ಅನ್ನು ಕೇಂದ್ರ ಸರಕಾರ ನಿರ್ವಹಿಸಿದ ರೀತಿ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿರುವ ಅವರು, ಸರ್ಕಾರ ಸಾಕಷ್ಟು ಮಾಹಿತಿಯನ್ನು ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.
ಭಯೋತ್ಪಾದಕ ದಾಳಿಕೋರರು ಎಲ್ಲಿದ್ದಾರೆ? ನೀವು ಅವರನ್ನೇಕೆ ಬಂಧಿಸಿಲ್ಲ ಅಥವಾ ಗುರುತಿಸಿಲ್ಲ? ದಾಳಿಕೋರರಿಗೆ ಆಶ್ರಯ ನೀಡಿದ ಕೆಲವು ಜನರನ್ನು ಬಂಧಿಸಲಾಗಿದೆ ಎಂಬ ಸುದ್ದಿಯಾಗಿತ್ತು. ಅವರಿಗೆ ಏನಾಯಿತು? ಎಂದು ಪ್ರಶ್ನಿಸಿದ್ದಾರೆ.
ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು (ಸಿಡಿಎಸ್) ಸಿಂಗಾಪುರಕ್ಕೆ ಹೋಗಿ ಕೆಲವು ಮಾಹಿತಿಯನ್ನು ನೀಡುತ್ತಾರೆ. ಉಪ ಸೇನಾ ಮುಖ್ಯಸ್ಥರು ಮುಂಬೈನಲ್ಲಿ ಹೇಳಿಕೆ ನೀಡುತ್ತಾರೆ. ಇಂಡೋನೇಷ್ಯಾದಲ್ಲಿ ನೌಕಾಪಡೆಯ ಕಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡುತ್ತಾರೆ. ಆದರೆ, ಪ್ರಧಾನಿ ಅಥವಾ ರಕ್ಷಣಾ ಸಚಿವರು ಅಥವಾ ವಿದೇಶಾಂಗ ಸಚಿವರು ಸಮಗ್ರವಾದ ಹೇಳಿಕೆಯನ್ನೇಕೆ ನೀಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ತನಿಖೆಯಲ್ಲಿ ಎನ್ಐಎ ಪಾತ್ರವನ್ನೂ ಪ್ರಶ್ನಿಸಿರುವ ಅವರು, ಇಷ್ಟು ವಾರಗಳಲ್ಲಿ ಎನ್ಐಎ ಏನು ತನಿಖೆ ಮಾಡಿದೆ ಎಂಬುದನ್ನು ಬಹಿರಂಗಪಡಿಸಲು ಅವರು ಸಿದ್ಧರಿಲ್ಲ. ಅವರು ಭಯೋತ್ಪಾದಕರನ್ನು ಪತ್ತಹೆಚ್ಚಿದ್ದಾರ? ಅವರು ಎಲ್ಲಿಂದ ಬಂದರು? ಅವರು ಸ್ವದೇಶಿ ಭಯೋತ್ಪಾದಕರಾಗಿರಬಹುದು. ಅವರು ಪಾಕಿಸ್ತಾನದಿಂದ ಬಂದವರು ಎಂದು ನೀವು ಏಕೆ ಭಾವಿಸುತ್ತೀರಿ? ಅದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದರು.
ಕೇಂದ್ರ ಸರ್ಕಾರ ಯುದ್ಧದಲ್ಲಿ ಸಂಭವಿಸಿದ ನಷ್ಟಗಳನ್ನು ಮರೆಮಾಡುತ್ತಿದ್ದಾರೆ. ಯುದ್ಧದಲ್ಲಿ ಎರಡೂ ಕಡೆಯೂ ನಷ್ಟ ಸಂಭವಿಸುತ್ತದೆ ಎಂದು ನಾನು ಒಂದು ಅಂಕಣದಲ್ಲಿ ಹೇಳಿದ್ದೆ. ಯುದ್ಧದಲ್ಲಿ ಭಾರತಕ್ಕೆ ನಷ್ಟವಾಗಿದೆಯಾ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಎಂದು ಹೇಳಿದ್ದಾರೆ.
ಇನ್ನು ಚಿದಂಬರಂ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮತ್ತೊಮ್ಮೆ ಕಾಂಗ್ರೆಸ್ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಲು ಧಾವಿಸುತ್ತಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಬಂದಾಗ, ಯಾವುದೇ ಅಸ್ಪಷ್ಟತೆ ಇರಬಾರದು. ಆದರೆ, ಕಾಂಗ್ರೆಸ್‌ನಲ್ಲಿ ಈ ಸ್ಪಷ್ಟತೆ ಎಂದಿಗೂ ಕಂಡು ಬರುವುದಿಲ್ಲ. ಅವರು ಯಾವಾಗಲೂ ಶತ್ರುವನ್ನು ರಕ್ಷಿಸಲು ತಲೆ ಬಾಗುತ್ತಾರೆಂದು ಕಿಡಿಕಾರಿದ್ದಾರೆ.
ಯುಪಿಎ ಸರ್ಕಾರದ ಮಾಜಿ ಗೃಹ ಸಚಿವ ಮತ್ತು ಕುಖ್ಯಾತ ‘ಕೇಸರಿ ಭಯೋತ್ಪಾದನೆ’ ಸಿದ್ಧಾಂತದ ಪ್ರತಿಪಾದಕ ಪಿ ಚಿದಂಬರಂ ಮತ್ತೊಮ್ಮೆ ತಮ್ಮನ್ನು ತಾವು ವೈಭವದಿಂದ ಪ್ರಸ್ತುತಪಡಿಸಿಕೊಂಡಿದ್ದಾರೆ. ಉಗ್ರರ ದಾಳಿಯ ನಂತರ ಮತ್ತೊಮ್ಮೆ ಕಾಂಗ್ರೆಸ್ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಲು ಧಾವಿಸುತ್ತದೆ. ನಮ್ಮ ಪಡೆಗಳು ಪ್ರತಿ ಬಾರಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸುವಾಗ, ಕಾಂಗ್ರೆಸ್ ನಾಯಕರು ದೇಶಕ್ಕಿಂತ ಇಸ್ಲಾಮಾಬಾದ್‌ನ ರಕ್ಷಣಾ ವಕೀಲರಂತೆ ಯಾಕೆ ವರ್ತಿಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ್ಲಾ ಅವರು ಪ್ರತಿಕ್ರಿಯಿಸಿ, ಸಂಸತ್ತಿನ ಚರ್ಚೆಗೆ ಕೆಲವೇ ಗಂಟೆಗಳ ಮೊದಲು ಕಾಂಗ್ರೆಸ್ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಪಿ.ಚಿದಂಬರಂ ಅವರ ಹೇಳಿಕೆ ಬೆಂಬಲಿಸಿರುವ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು, “ಕದನ ವಿರಾಮಕ್ಕೆ ಒಪ್ಪುವ ಮೂಲಕ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ್ದು ಕೇಂದ್ರ ಸರ್ಕಾರವೇ ಎಂದು ಹೇಳಿದ್ದಾರೆ.
ಜಾಗತಿಕ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಮಟ್ಟಕ್ಕೆ ತಂದಿದ್ದೀರಿ. ಭಯೋತ್ಪಾದಕರು ಇನ್ನೂ ಜೀವಂತವಾಗಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಪಹಲ್ಗಾಮ್ ಹಂತಕರು ಜೀವಂತವಾಗಿದ್ದರೆ, ಪ್ರತಿಯೊಬ್ಬ ಭಾರತೀಯನೂ ನಾಚಿಕೆಪಡಬೇಕು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.