ಡಾರ್ಜಿಲಿಂಗ್: ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಡಿ ರಕ್ಷಣಾ ಪಡೆ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದ್ದರಿಂದ ಬಾಂಗ್ಲಾದೇಶದ ಪ್ರಜೆಯೊಬ್ಬ ಸಾವನ್ನಪ್ಪಿದ್ದು, ಗಡಿ ಭದ್ರತಾ ಪಡೆ ಯೋಧ ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಡಾರ್ಜಿಲಿಂಗ್ ಜಿಲ್ಲೆಯ ಖಲ್ಪಾರಾ ಗ್ರಾಮದ ಬಳಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. 15-20 ಬಾಂಗ್ಲಾದೇಶಿ ದುಷ್ಕರ್ಮಿಗಳಿದ್ದ ಗುಂಪೊಂದು ಅಕ್ರಮವಾಗಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭಾರತದ ಭೂಪ್ರದೇಶದೊಳಗೆ ಪ್ರವೇಶಿಸಿದೆ.
ಈ ಗುಂಪಿಗೆ ಭಾರತದ ಕಡೆಯಿಂದ ಜಾನುವಾರ ಸಾಗಿಸಲು ಯತ್ನಿಸುತ್ತಿದ್ದ ದುಷ್ಕರ್ಮಿಗಳು ಸೇರಿಕೊಂಡಿದ್ದರು ಎಂದು ಬಿಎಸ್ ಎಫ್ ವಕ್ತಾರರು ವಕ್ತಾರರು ತಿಳಿಸಿದ್ದಾರೆ.
ಶರಣಾಗುವಂತೆ ಅವರನ್ನು ಬಿಎಸ್‌ಎಫ್ ಗಸ್ತು ಪಡೆ ಕೇಳಿಕೊಂಡಿದ್ದೆ. ಆದರೆ ಎಲ್ಲಾ ದುಷ್ಕರ್ಮಿಗಳು ಕುಡುಗೋಲು, ದೊಣ್ಣೆಗಳಿಂದ ದಾಳಿ ಮಾಡಿದ್ದು, ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ದಾಳಿಕೋರರನ್ನು ಚದುರಿಸಲು BSF ಸೈನಿಕರು ಮಾರಕವಲ್ಲದ ಮದ್ದುಗುಂಡುಗಳನ್ನು ಹಾರಿಸಿದ್ದಾರೆ. ಆದರೆ ಅದಕ್ಕೂ ಜಗ್ಗದ ದುಷ್ಕರ್ಮಿಗಳು, ಯೋಧರೊಬ್ಬರಿಂದ ರೈಫಲ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಪ್ರಾಣಪಾಯವನ್ನು ಅರಿತ ಯೋಧ ತನ್ನ ರೈಫಲ್‌ನಿಂದ ಗುಂಡು ಹಾರಿಸಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ವಕ್ತಾರರು ವಿವರಿಸಿದ್ದಾರೆ.
ಘಟನೆಯಲ್ಲಿ ಬಾಂಗ್ಲಾದೇಶದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, BSF ಯೋಧರೊಬ್ಬರು ಗಾಯಗೊಂಡಿದ್ದಾರೆ. ಗಡಿ ಬೇಲಿಯನ್ನು ಬಾಂಗ್ಲಾದೇಶಿ ಕಳ್ಳಸಾಗಣೆದಾರರು ನಾಶಪಡಿಸಿರುವುದು ಕಂಡುಬಂದಿದೆ. ದುಷ್ಕರ್ಮಿಗಳು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಎರಡು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.