ಚೆನ್ನೈ: ಪತ್ನಿ ಕಾಟಕ್ಕೆ ಬೇಸತ್ತಿರುವ ಮತ್ತೋರ್ವ ಗಂಡ ಸಾಮಾಜಿಕ ಜಾಲತಾಣದ ಮೂಲಕ ತನ್ನ ಅಳಲು ಹೊರಹಾಕಿದ್ದು, ಇತ್ತ ಪೊಲೀಸರು ಲಂಚಕ್ಕಾಗಿ ಸತಾಯಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚೆನ್ನೈ ಮೂಲದ ಟೆಕ್ಕಿ ಪ್ರಸನ್ನ ಶಂಕರ್ ತನ್ನ ಪತ್ನಿಯ ವಿರುದ್ಧವೇ ಗಂಭೀರ ಆರೋಪ ಮಾಡಿದ್ದು, ಕೌಟುಂಬಿಕ ಹಿಂಸೆ ನೀಡಿದ್ದು ಮಾತ್ರವಲ್ಲದೇ ತನ್ನ ಮಗನನ್ನು ಅಮೆರಿಕಕ್ಕೆ ಅಪಹರಿಸಿದ್ದೇನೆ ಎಂದು ಪತ್ನಿ ಆರೋಪಿಸಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಈ ಬಗ್ಗೆ ದೂರು ದಾಖಲಿಸಲಾಗಿದ್ದು ಪೊಲೀಸರು ತನ್ನಿಂದಲೇ ಪೊಲೀಸರು 25 ಲಕ್ಷ ರೂ ಸುಲಿಗೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಷ್ಟಕ್ಕೂ ಯಾರು ಈ ಪ್ರಸನ್ನ ಶಂಕರ್
ಚೆನ್ನೈ ಮೂಲದ ಟೆಕ್ಕಿ ಪ್ರಸನ್ನ ಕುಮಾರ್ ಅಮೆರಿಕದ ಸ್ಟಾರ್ಟಪ್ ಸಂಸ್ಥೆಯ ಸಹ ಮಾಲೀಕರಾಗಿದ್ದಾರೆ. ಪ್ರಸನ್ನ ಶಂಕರ್ ಬಹುಕೋಟಿ ಡಾಲರ್ ಮೌಲ್ಯದ ಕಂಪನಿಯ ರಿಪ್ಲಿಂಗ್ ಕಂಪನಿ ಸಹ-ಸಂಸ್ಥಾಪಕರಾಗಿದ್ದಾರೆ. ಪ್ರಸನ್ನ ಶಂಕರ್ ಅಮೆರಿಕಾದಲ್ಲಿ ರಿಪ್ಪಲಿಂಗ್ ಎಂಬ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ. ಬರೋಬ್ಬರಿ 10 ಬಿಲಿಯನ್ ಡಾಲರ್ ಮೌಲ್ಯದ ಈ ಕಂಪನಿಯ ಸಹ-ಸಂಸ್ಥಾಪಕ.
ಪ್ರಸನ್ನ ಕಳೆದ 10 ವರ್ಷದ ಹಿಂದೆ ದಿವ್ಯಶ್ರೀ ಅನ್ನು ಮದುವೆಯಾಗಿದ್ದರು. ಗಂಡ-ಹೆಂಡತಿ 10 ವರ್ಷದ ದಾಂಪತ್ಯಕ್ಕೆ ಸುಂದರವಾದ 9 ವರ್ಷದ ಮಗು ಸಾಕ್ಷಿಯಾಗಿದೆ. ಇದೇ ಟೆಕ್ಕಿ ಇದೀಗ ವಿಚ್ಛೇದನ ಮತ್ತು ಮಗನ ಕಸ್ಟಡಿ ಹೋರಾಟದ ನಡುವೆ ತಮ್ಮ ಪರಿತ್ಯಕ್ತ ಪತ್ನಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಪತ್ನಿ ದಿವ್ಯಾ ಸಲ್ಲಿಸಿರುವ "ಅಪಹರಣ" ದೂರಿನ ತನಿಖೆ ನಡೆಸುತ್ತಿರುವ ಚೆನ್ನೈ ಪೊಲೀಸರು ತಮ್ಮಿಂದ 25 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸರಣಿ ಪೋಸ್ಚ್
ಎಕ್ಸ್ ನಲ್ಲಿ ಟೆಕ್ಕಿ ಪ್ರಸನ್ನ ಕುಮಾರ್ ಸರಣಿ ಪೋಸ್ಟ್ ಮಾಡಿದ್ದು, ತನ್ನ ಪತ್ನಿಯ ಸುಳ್ಳು ದೂರಿನಿಂದಾಗಿ ನಾನು ಈಗ ನನ್ನ ಸಂಸ್ಥೆಯನ್ನೇ ತೊರೆದು ತಲೆ ಮರೆಸಿಕೊಂಡು ಓಡಾಡುವಂತಾಗಿದೆ. ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು 25 ಲಕ್ಷ ರೂ ಲಂಚಕ್ಕಾಗಿ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ. ಎಫ್ ಐಆರ್ ದಾಖಲಿಸುವ ಮುನ್ನವೇ ಪೊಲೀಸರು ನನ್ನ ಮೊಬೈಲ್ ಫೋನ್, ಕಾರು ಮತ್ತು ಐಪಿ ವಿಳಾಸವನ್ನು ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪತ್ನಿಗೆ ಅಕ್ರಮ ಸಂಬಂಧ
ಇದೇ ವೇಳೆ ಪತ್ನಿ ಕುರಿತು ಮಾತನಾಡಿರುವ ಪ್ರಸನ್ನ ಕುಮಾರ್, ನನ್ನ ಪತ್ನಿ ದಿವ್ಯಾಗೆ ಮತ್ತೋರ್ವನೊಂದಿಗೆ ಅಕ್ರಮ ಸಂಬಂಧ ಇದೆ. ಪತ್ನಿ ದಿವ್ಯಶ್ರೀ, ಅನೂಪ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ. ಈ ಸತ್ಯ ಅನೂಪ್‌ನ ಪತ್ನಿಯಿಂದಲೇ ನನಗೆ ಗೊತ್ತಾಗಿದೆ ಎಂದಿದ್ದಾರೆ. ದಿವ್ಯಶ್ರೀಯಿಂದ ಡಿವೋರ್ಸ್ ಪಡೆಯಲು ಪ್ರಸನ್ನ ಭಾರತದ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಸನ್ನ ಡಿವೋರ್ಸ್‌ಗಾಗಿ ಭಾರತದಲ್ಲಿ ಅರ್ಜಿ ಹಾಕಿದ್ದು, ದಿವ್ಯಶ್ರೀ ಪತಿ ವಿರುದ್ಧ ಸಿಂಗಾಪೂರ್ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದಾರೆ. ನನ್ನ ಅಶ್ಲೀಲ ಫೋಟೋಗಳನ್ನು ಪತಿ ಪ್ರಸನ್ನ ಹರಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪಹರಣ, ಅತ್ಯಾಚಾರ ದಂತಹ ದೂರು ನೀಡಿದ್ದಾಳೆ. ಇಷ್ಟು ಮಾತ್ರವಲ್ಲದೇ ನಾನು ಆಕೆಯ ನಗ್ನ ವಿಡಿಯೋಗಳನ್ನು ಇಂಟರ್ನೆಟ್ ಗೆ ಅಪ್ಲೋಡ್ ಮಾಡಿದ್ದೇನೆ ಎಂದು ಆರೋಪಿಸಿದ್ದಾಳೆ. ಈ ಪ್ರಕರಣಗಳ ಸಂಬಂಧ ಚೆನ್ನೈ ಮಾತ್ರವಲ್ಲದೇ ಸಿಂಗಾಪುರದಲ್ಲೂ ಪ್ರಕರಣ ದಾಖಲಾಗಿದ್ದು, ಸಿಂಗಾಪುರ ಪೊಲೀಸರು ಕೂಡ ತನಿಖೆ ನಡೆಸಿ ನನಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಹೇಳಿದ್ದಾರೆ.
ಮಗನ ಅಪಹರಣ
ಇನ್ನು ಪತ್ನಿ ದಿವ್ಯಾ ನನ್ನ 9 ವರ್ಷದ ಮಗನನ್ನು ಅಪಹರಿಸಿದ್ದು, ಅಮೆರಿಕಕ್ಕೆ ಕರೆದೊಯ್ದಿದ್ದಾಳೆ. ಹೀಗಾಗಿ ನಾನು ಆಕೆಯ ವಿರುದ್ಧ ಅಂತರರಾಷ್ಟ್ರೀಯ ಮಕ್ಕಳ ಅಪಹರಣ ಪ್ರಕರಣ ದಾಖಲಿಸಲು ಮುಂದಾಗಿದ್ದೇನೆ. ಈ ಹಿಂದೆ ಅಮೆರಿಕದ ನ್ಯಾಯಾಲಯವು ತನ್ನ ಪರವಾಗಿ ತೀರ್ಪು ನೀಡಿತ್ತು, ಇದರಿಂದಾಗಿ ಎರಡೂ ಪಕ್ಷಗಳ ನಡುವೆ ತಿಳುವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಲಾಯಿತು. ಒಪ್ಪಂದದ ನಿಯಮಗಳ ಪ್ರಕಾರ, ನಾನು ಪತ್ನಿ ದಿವ್ಯಾಗೆ ತಿಂಗಳಿಗೆ ಸುಮಾರು 9 ಕೋಟಿ 4.3 ಲಕ್ಷ ರೂ.ಗಳನ್ನು ಪಾವತಿಸಬೇಕಾಗಿತ್ತು ಮತ್ತು ಮಗನ ಜಂಟಿ ಪಾಲನೆಯನ್ನು ಹಂಚಿಕೊಳ್ಳಬೇಕಾಗಿತ್ತು.
ಇದಾದ ನಂತರ, ದಿವ್ಯಾ ಅವರೊಂದಿಗೆ ಚೆನ್ನೈಗೆ ಬಂದು ತಮ್ಮ ಮಗನನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮಾತುಕತೆ ನಡೆಸಿದೆ. ಕೊನೆಗೆ ಇಬ್ಬರ ನಡುವೆ ರಾಜೀ ಸಂಧಾನ ನಡೆದು ಪತಿ ಪ್ರಸನ್ನ, ಪತ್ನಿ ದಿವ್ಯಶ್ರೀಗೆ 9 ಕೋಟಿ ಹಣ ನೀಡಿ ಡಿವೋರ್ಸ್ ಪಡೆಯೋ ಒಪ್ಪಂದ ಆಗಿದೆ. ಮಗನನ್ನು ಇಬ್ಬರ ಜೊತೆಗೆ 50-50 ದಿನಗಳ ಆಧಾರದ ಮೇಲೆ ಇರಿಸಿಕೊಳ್ಳುವ ನಿರ್ಧಾರವಾಗಿದೆ. ಆದಾಗ್ಯೂ, ಅವರ ಪತ್ನಿ ಒಪ್ಪಂದವನ್ನು ಪಾಲಿಸಲು ನಿರಾಕರಿಸಿದ್ದಾಳೆ. ಅಲ್ಲದೆ ಮಗಗನ್ನು ಅಮೆರಿಕಕ್ಕೆ ಕರೆದೊಯ್ದಿದ್ದಾಳೆ ಎಂದು ಶಂಕರ್ ಆರೋಪಿಸಿದ್ದಾರೆ.
ಗಂಡ-ಹೆಂಡತಿ ಒಪ್ಪಂದದ ಪ್ರಕಾರ ಪತ್ನಿ ದಿವ್ಯಶ್ರೀ ಮಗನ ಪಾಸ್‌ಪೋರ್ಟ್ ಅನ್ನು ಲಾಕರ್‌ನಲ್ಲಿ ಡೆಪಾಸಿಟ್ ಇಡಬೇಕು. ಆದರೆ ಈ ಒಪ್ಪಂದಕ್ಕೆ ಒಪ್ಪದ ದಿವ್ಯಶ್ರೀ ಅಮೆರಿಕಾಕ್ಕೆ ವಾಪಸ್ ಹೋಗಿ ಮತ್ತೆ ಡಿವೋರ್ಸ್ ಕೇಸ್ ಹಾಕಲು ಯತ್ನಿಸಿದ್ದಾರೆ. ಜೊತೆಗೆ ಪ್ರಸನ್ನ ವಿರುದ್ಧ ಭಾರತದಲ್ಲೂ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡಿದ್ದಾರೆ ಎಂದು ಟೆಕ್ಕಿ ಪ್ರಸನ್ನ ಆರೋಪಿಸಿದ್ದಾರೆ.
ಚೆನ್ನೈ ಪೊಲೀಸರ ಕಿರುಕುಳ
ಪ್ರಸನ್ನ ಸ್ನೇಹಿತ ಗೋಕುಲ್ ವಿರುದ್ಧ ಚೆನ್ನೈ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಗೋಕುಲ್ ಅವರನ್ನ ಠಾಣೆಗೆ ಕರೆಸಿದ್ದರಿಂದಾಗಿ ಪ್ರಸನ್ನ ತಮಿಳುನಾಡು ಬಿಟ್ಟು ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಗೌಪ್ಯವಾದ ಜಾಗದಿಂದಲೇ ಪ್ರಸನ್ನ ವಿಡಿಯೋ ಮಾಡಿದ್ದು, ನನಗೆ ಕಿರುಕುಳ ಕೊಡಬೇಡಿ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಪ್ರಸನ್ನ ಹೇಳಿದ್ದಾರೆ. ಹೆಂಡತಿ ಕಿರುಕುಳದ ಬಗ್ಗೆ ಪ್ರಸನ್ನ ವಿಡಿಯೋ ಬಿಡುಗಡೆ ಮಾಡಿದ್ದು, ನಮ್ಮ ಇಡೀ ಕುಟುಂಬ ಸದ್ಯ ತಮಿಳುನಾಡಿನಿಂದ ಹೊರಗೆ ಇದ್ದೇವೆ ಎಂದಿದ್ದಾರೆ. ಪ್ರಸನ್ನ ಅವರ ಪರದಾಟ ಹಾಗೂ ಹೋರಾಟಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಚೆನ್ನೈ ಪೊಲೀಸರು ಪ್ರಸನ್ನ ಸ್ನೇಹಿತ ಗೋಕುಲ್ ಅವರನ್ನು ಠಾಣೆಯಿಂದ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಲಂಚಕ್ಕೆ ಬೇಡಿಕೆ
ಸ್ನೇಹಿತ ಗೋಕುಲ್ ನನ್ನು ಬಿಡುಗಡೆ ಮಾಡಲು ಚೆನ್ನೈ ಪೊಲೀಸರು 25 ಲಕ್ಷ ರೂಪಾಯಿ ಲಂಚ ನೀಡುವಂತೆ ಕೇಳಿದ್ದಾರೆ. "ನಾನು ಯಶಸ್ವಿ ಸ್ಟಾರ್ಟಪ್ ಸಂಸ್ಥಾಪಕ ಎಂದು ತಿಳಿದುಕೊಂಡು ಚೆನ್ನೈನ ತಿರುಮಂಗಲಂ ಪೊಲೀಸ್ ಠಾಣೆಯವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಬಂಧನದಲ್ಲಿರುವ ನನ್ನ ಸ್ನೇಹಿತನನ್ನು ಬಿಡುಗಡೆ ಮಾಡಲು ಎಸಿ ಮತ್ತು ಎಸ್‌ಐ 25 ಲಕ್ಷ ರೂ ಲಂಚ ಕೇಳಿದ್ದಾರೆ ಎಂದು ಟೆಕ್ಕಿ ಪ್ರಸನ್ನ ಟ್ವೀಟ್ ಮಾಡಿದ್ದಾರೆ. ಆದರೆ ಪ್ರಸನ್ನ ಅವರ ಆರೋಪವನ್ನು ಚೆನ್ನೈ ಪೊಲೀಸರು ನಿರಾಕರಿಸಿದ್ದಾರೆ.
ಅವನೊಬ್ಬ ಕಾಮ ಪಿಪಾಸು ಎಂದ ಪತ್ನಿ
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಟೆಕ್ಕಿ ಪ್ರಸನ್ನ ಅವರ ಆರೋಪಗಳಿಗೆ ಪತ್ನಿ ದಿವ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದು, ಪತಿ ಪ್ರಸನ್ನ ಅವರನ್ನು 'ಕಾಮ ಪಿಪಾಸು' ಎಂದು ಟೀಕಿಸಿದ್ದಾರೆ. ದಿವ್ಯಾ ತಮ್ಮ ದೂರಿನಲ್ಲಿ ಶಂಕರ್ ಅವರೇ "ತಪ್ಪು" ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಗನನ್ನು ಬಲವಂತವಾಗಿ ತನ್ನಿಂದ ಕರೆದುಕೊಂಡು ಹೋಗಲಾಗಿದೆ. ತಾನು ಮತ್ತು ತನ್ನ ಮಗ ಅಮೆರಿಕದ ನಾಗರಿಕರು ಎಂದು ದಿವ್ಯಾ ಹೇಳಿಕೊಂಡಿದ್ದಾರೆ.
ಇದೇ ವೇಳೆ ಟೆಕ್ಕಿ ಪ್ರಸನ್ನ ಓರ್ವ ಕಾಮ ಪಿಪಾಸು ಆಗಿದ್ದು, ತನ್ನ ಕಾಮ ತೃಷೆಗಾಗಿ ನನ್ನ ಮೇಲೆ ಹಲವು ಬಾರಿ ದೌರ್ಜನ್ಯ ನಡೆಸಿದ್ದ. ನನ್ನ ಖಾಸಗಿ ವಿಡಿಯೋಗಳನ್ನು ನನಗೇ ಅರಿವಿಲ್ಲದ ರೀತಿಯಲ್ಲಿ ರೆಕಾರ್ಡ್ ಮಾಡುತ್ತಿದ್ದ. ಇದೇ ಕಾರಣಕ್ಕೆ ಈ ಹಿಂದೆ ಆತನನ್ನು ಸಿಂಗಾಪುರದಲ್ಲಿ ಬಂಧಿಸಲಾಗಿತ್ತು. ಇದಲ್ಲದೆ ಆದಾಯ ತೆರಿಗೆ ವಂಚಿಸಲು ತನ್ನ ಆಸ್ತಿಗಳನ್ನು ಶಂಕರ್ ತನ್ನ ತಂದೆಯ ಹೆಸರಿಗೆ ವರ್ಗಾಯಿಸಿದ್ದ. ಅವರ ತಂದೆ ಈ ಆಸ್ತಿಗಳನ್ನು ಥೈಲ್ಯಾಂಡ್‌ನಲ್ಲಿರುವ ತನ್ನ ಸಹೋದರನಿಗೆ ವರ್ಗಾಯಿಸಿದ್ದಾರೆ. ಅಂತೆಯೆ ತನ್ನ ಈ ತೆರಿಗೆ ಅಪರಾಧಗಳನ್ನು ವರದಿ ಮಾಡದಂತೆ ತಡೆಯುವ ದಾಖಲೆಗಳಿಗೆ ಸಹಿ ಹಾಕುವಂತೆ ನನಗೆ ಬೆದರಿಕೆ ಹಾಕಿದ್ದ ಎಂದು ದಿವ್ಯಾ ಆರೋಪಿಸಿದ್ದಾರೆ.
ಜಗತ್ತಿನಲ್ಲೇ ಅತಿ ಹೆಚ್ಚು ಚರ್ಚೆಯಾದ ಕೇಸ್!
ಇನ್ನು ಟೆಕ್ಕಿ ಪ್ರಸನ್ನ ಅವರ ಈ ಪ್ರಕರಣ ಇದೀಗ ಜಗತ್ತಿನಲ್ಲೇ ಅತಿ ಹೆಚ್ಚು ಚರ್ಚೆಯಾದ ಪ್ರಕರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟೆಕ್ಕಿ ಪ್ರಸನ್ನ ಶಂಕರ್ ಪ್ರಕರಣ ಟ್ರೆಂಡ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.