ನವದೆಹಲಿ: ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ 'ರಾ' ವಿರುದ್ಧ ನಿರ್ಬಂಧಗಳನ್ನು ಶಿಫಾರಸು ಮಾಡಿದ ಮತ್ತು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗಾಗಿ ಭಾರತವನ್ನು 'ನಿರ್ದಿಷ್ಟ ಕಳವಳದ ದೇಶ' ಎಂದು ಹೆಸರಿಸುವಂತೆ ಅಮೆರಿಕವನ್ನು ಒತ್ತಾಯಿಸಿದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ(ಯುಎಸ್‌ಸಿಐಆರ್‌ಎಫ್) 2025ರ ವಾರ್ಷಿಕ ವರದಿಯನ್ನು ಭಾರತ ಬುಧವಾರ ತಿರಸ್ಕರಿಸಿದೆ.
ಅಮೆರಿಕದ CIRF ವರದಿಯನ್ನು "ಪಕ್ಷಪಾತಿ ಮತ್ತು ರಾಜಕೀಯ ಪ್ರೇರಿತ" ಎಂದು ಟೀಕಿಸಿದ ಭಾರತ, ಪ್ರಜಾಪ್ರಭುತ್ವ ಮತ್ತು ಸಹಿಷ್ಣುತೆಯ ಸಂಕೇತವಾಗಿರುವ ಭಾರತದ ಖ್ಯಾತಿಯನ್ನು "ಕುಗ್ಗಿಸುವ" ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದೆ. ಅಲ್ಲದೆ ಯುಎಸ್‌ಸಿಐಆರ್‌ಎಫ್ ಅನ್ನು "ಕಳವಳಕಾರಿ ಘಟಕ" ಎಂದು ಘೋಷಿಸಬೇಕು ಎಂದು ಭಾರತ ಪ್ರತಿಪಾದಿಸಿದೆ.
ವಾರ್ಷಿಕ ವರದಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಯುಎಸ್‌ಸಿಐಆರ್‌ಎಫ್ "ಪ್ರತ್ಯೇಕ ಘಟನೆಗಳನ್ನು ತಪ್ಪಾಗಿ ನಿರೂಪಿಸಲು ಮತ್ತು ಭಾರತದ ಚೈತನ್ಯಶೀಲ ಬಹುಸಂಸ್ಕೃತಿ ಸಮಾಜವನ್ನು ಕೆಟ್ಟದಾಗಿ ಬಿಂಬಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನಿಜವಾದ ಕಾಳಜಿಗಿಂತ ಉದ್ದೇಶಪೂರ್ವಕ ಕಾರ್ಯಸೂಚಿಯನ್ನು ಪ್ರತಿಬಿಂಬಿಸಲಾಗುತ್ತಿದೆ" ಎಂದಿದ್ದಾರೆ.
ಈ ವರದಿಯು ಪಕ್ಷಪಾತ ಮತ್ತು ರಾಜಕೀಯ ಪ್ರೇರಿತವಾಗಿದೆ. ಭಾರತವು ಎಲ್ಲಾ ಧರ್ಮಗಳಿಗೆ ಸೇರಿದ 1.4 ಶತಕೋಟಿ ಜನರಿಗೆ ನೆಲೆಯಾಗಿದೆ. ಆದಾಗ್ಯೂ, USCIRF ಭಾರತದ ಬಹುತ್ವ ಚೌಕಟ್ಟಿನ ವಾಸ್ತವದೊಂದಿಗೆ ತೊಡಗಿಸಿಕೊಳ್ಳುತ್ತದೆ ಅಥವಾ ಅದರ ವೈವಿಧ್ಯಮಯ ಸಮುದಾಯಗಳ ಸಾಮರಸ್ಯದ ಸಹಬಾಳ್ವೆಯನ್ನು ಅಂಗೀಕರಿಸುತ್ತದೆ ಎಂದು ನಾವು ನಿರೀಕ್ಷಿಸುವುದಿಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
"2024 ರಲ್ಲಿ, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ತಾರತಮ್ಯ ಹೆಚ್ಚುತ್ತಲೇ ಇದ್ದುದರಿಂದ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿಗಳು ಹದಗೆಡುತ್ತಲೇ ಇವೆ" ಎಂದು USCIRF ವರದಿ ಹೇಳಿದೆ.
ಭಾರತವು ಅಮೆರಿಕ ಮತ್ತು ಕೆನಡಾಗಳಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ 2023ರಿಂದಲೂ ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆಗಳು ಹೆಚ್ಚಿವೆ.