ಆದಂಪುರ: ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಪ್ರಯತ್ನ ಮತ್ತು ಶೌರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಶ್ಲಾಘಿಸಿದ್ದಾರೆ.
ಇಂದು ಪಂಜಾಬ್‌ನ ಆದಂಪುರ ವಾಯುನೆಲೆಗೆ ಭೇಟಿ ನೀಡಿ, ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರಿಗೆ ಭಾರತ ತಕ್ಕ ಪಾಠ ಕಲಿಸಿದೆ. ಭಾರತೀಯ ವಾಯುಪಡೆ ದೇಶ ಹೆಮ್ಮೆಪಡುವಂತೆ ಮಾಡಿದೆ ಎಂದರು.
ಪಾಕಿಸ್ತಾನದ ಡ್ರೋನ್, ಅವರ ಯುಎವಿಗಳು, ವಿಮಾನಗಳು ಮತ್ತು ಕ್ಷಿಪಣಿಗಳು ಇವೆಲ್ಲವೂ ನಮ್ಮ ಸಮರ್ಥ ವಾಯು ರಕ್ಷಣೆಯ ಮುಂದೆ ವಿಫಲವಾದವು. ದೇಶದ ಎಲ್ಲಾ ವಾಯುನೆಲೆಗಳ ನಾಯಕತ್ವ ಮತ್ತು ಭಾರತೀಯ ವಾಯುಪಡೆಯ ಪ್ರತಿಯೊಬ್ಬ ಯೋಧರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನೀವು ನಿಜವಾಗಿಯೂ ಅದ್ಭುತ ಕೆಲಸ ಮಾಡಿದ್ದೀರಿ. ಐಎಎಫ್ ಭಾರತವನ್ನು ಹೆಮ್ಮೆಪಡುವಂತೆ ಮಾಡಿದೆ ಶ್ಲಾಘಿಸಿದರು.
"ನೀವೆಲ್ಲರೂ ನಿಮ್ಮ ಗುರಿಯನ್ನು ಪರಿಪೂರ್ಣತೆಯಿಂದ ತಲುಪಿದ್ದೀರಿ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಪಾಕಿಸ್ತಾನದಲ್ಲಿ, ಭಯೋತ್ಪಾದಕ ಶಿಬಿರಗಳು ಮತ್ತು ಅವರ ವಾಯುನೆಲೆಗಳನ್ನು ನಾಶ ಮಾಡಿದ್ದೀರಿ. ಆಪರೇಷನ್ ಸಿಂಧೂರ್‌ನೊಂದಿಗೆ ನೀವು ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದೀರಿ" ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಲು ಪಾಕಿಸ್ತಾನ ಸೇನೆ ನಡೆಸಿದ ಯತ್ನಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಆಪರೇಷನ್ ಸಿಂಧೂರ್ ನಂತರ, ಶತ್ರುಗಳು ನಮ್ಮ ವಾಯುನೆಲೆಗಳ ಮೇಲೆ ಹಲವಾರು ಬಾರಿ ದಾಳಿ ಮಾಡಲು ಪ್ರಯತ್ನಿಸಿದರು. ಆದರೆ ನಾವು ಅವರ ದಾಳಿಯನ್ನು ಪ್ರತಿ ಬಾರಿಯೂ ವಿಫಲಗೊಳಿಸಿದ್ದೇವೆ" ಎಂದರು.
ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಈಗ ಯಾವುದೇ ಸ್ಥಳವೂ ಸುರಕ್ಷಿತವಲ್ಲ ಎಂಬ ಸಂದೇಶವನ್ನು ಭಾರತ ರವಾನಿಸಿದೆ. ನಾವು ಅವರನ್ನು ಧೂಳೀಪಟ ಮಾಡಿದ್ದೇವೆ. ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಪಾಕಿಸ್ತಾನಿ ಸೈನ್ಯವನ್ನು ಸೋಲಿಸಿವೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರು ಶಾಂತಿಯುತವಾಗಿ ಬದುಕಲು ಯಾವುದೇ ಸ್ಥಳವೂ ಉಳಿದಿಲ್ಲ ಎಂಬ ಸಂದೇಶವನ್ನು ನಾವು ಅವರಿಗೆ ನೀಡಿದ್ದೇವೆ. ನಾವು ಅವರ ಮನೆಯೊಳಗೆ ನುಗ್ಗಿ ಹೊಡೆದಿದ್ದೇವೆ. ನಮ್ಮ ಧರ್ಮದ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹಿಡಿಯುವುದು ನಮ್ಮ ಸಂಪ್ರದಾಯ. ಆದ್ದರಿಂದ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಕಸಿದುಕೊಂಡಾಗ ನಾವು ಭಯೋತ್ಪಾದಕರನ್ನು ಅವರ ಸ್ವಂತ ಮನೆಗಳಿಗೆ ನುಗ್ಗಿ ಹತ್ತಿಕ್ಕಿದ್ದೇವೆ” ಎಂದು ಮೋದಿ ಹೇಳಿದರು.