ಪಾಟ್ನಾ: ನನ್ನ ಕುಟುಂಬಕ್ಕಾಗಿ ಏನನ್ನೂ ಮಾಡಿಕೊಂಡಿಲ್ಲ. ಯಾವಾಗಲೂ ರಾಜ್ಯದ ಬೆಳವಣಿಗೆಗೆ ಆದ್ಯತೆ ನೀಡಿರುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಹೇಳಿದ್ದಾರೆ.
ಜೆಡಿಯು ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ನವೆಂಬರ್ 2005 ರಲ್ಲಿ ತಮ್ಮ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ "ಗಮನಾರ್ಹವಾಗಿ ಸುಧಾರಿಸಿದೆ" ಎಂದು ಕುಮಾರ್ ಹೇಳಿದ್ದಾರೆ.
2005 ರಲ್ಲಿ ನಾವು ಅಧಿಕಾರಕ್ಕೆ ಬರುವ ಮುನ್ನಾ ಬಿಹಾರದ ಪರಿಸ್ಥಿತಿಯನ್ನು ಜನರು ತಿಳಿದಿದ್ದರು. ನಾವು ಕಾನೂನು ಮತ್ತು ಸುವ್ಯವಸ್ಥೆ ಮರುಸ್ಥಾಪನೆಗೆ ಆದ್ಯತೆ ನೀಡಿದ್ದೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಿದ್ದೇವೆ. ಈಗ ಬಿಹಾರಿಯಾಗಿರುವುದು ರಾಜ್ಯದ ನಿವಾಸಿಗಳಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಮಹಿಳೆಯರು, ಹಿಂದೂಗಳು, ಮುಸ್ಲಿಮರು, ಮೇಲ್ವರ್ಗದವರು ದಲಿತರು ಮತ್ತು ಸಮಾಜದ ದುರ್ಬಲ ವರ್ಗ, ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ತಮ್ಮ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದ ತ್ವರಿತ ಅಭಿವೃದ್ಧಿಗಾಗಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.