ಪಾಟ್ನಾ: ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಳೆದ 20 ವರ್ಷಗಳಲ್ಲೇ ಅತ್ಯಧಿಕ ದಾಖಲೆ ಮತಗಳಿಂದ ಎನ್ ಡಿಎ ಗೆಲ್ಲಿಸಲು ಜನರು ನಿರ್ಧರಿಸಿದ್ದು, ಜಂಗಲ್ ರಾಜ್ ಜನರು ಹೀನಾಯವಾಗಿ ಸೋಲಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭವಿಷ್ಯ ನುಡಿದಿದ್ದಾರೆ.
ಬಿಹಾರದ ಮಹಿಳಾ ಬಿಜೆಪಿ-ಎನ್ ಡಿಎ ಕಾರ್ಯಕರ್ತರೊಂದಿಗೆ ನಮೋ ಆಪ್ ಮೂಲಕ ಸಂವಾದ ನಡೆಸಿದ ಪ್ರಧಾನಿ, ಬಿಹಾರದಲ್ಲಿ ಹಲವು ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದೇನೆ. ಪ್ರತಿಯೊಂದು ಸಮಾವೇಶದಲ್ಲೂ ದಾಖಲೆ ಪ್ರಮಾಣದಲ್ಲಿ ಜನರು ಸೇರುತ್ತಿದ್ದು, ಹೆಚ್ಚಿನ ಸಂಖ್ಯೆಯ ಮಹಿಳೆಯರು ಬರುತ್ತಿದ್ದಾರೆ. ಬಿಹಾರ ಬಿಜೆಪಿಯ ಮಹಿಳಾ ಕಾರ್ಯಕರ್ತರು 'ಮೇರಾ ಬೂತ್, ಸಬ್ಸೆ ಮಜ್ಬೂತ್' ಎಂಬ ಸಂಕಲ್ಪದೊಂದಿಗೆ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸಮೀಕ್ಷೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಎನ್ ಡಿಎ ದೊಡ್ಡ ಗೆಲುವು ಸಾಧಿಸುತ್ತದೆ ಎಂದು ದೃಢಪಡಿಸಲಾಗಿದೆ. ಆದ್ದರಿಂದ ಗೆಲುವಿನ ಬಗ್ಗೆ ನನಗೆ ಯಾವುದೇ ಪ್ರಶ್ನೆಗಳಿಲ್ಲ ಆದರೆ ಹೆಚ್ಚು ಹೆಚ್ಚು ಮತದಾನ ನಡೆಯಬೇಕು" ಎಂದು ಪ್ರಧಾನಿ ಹೇಳಿದರು.
ಎನ್‌ಡಿಎ ಬಗ್ಗೆ ಜನರಲ್ಲಿ ಅಪಾರ ಉತ್ಸಾಹವಿದೆ. ಅವರ ಮಾತುಗಳು ಬಡವರು, ದಲಿತರು, ಮಹಾ ದಲಿತರು, ಹಿಂದುಳಿದವರು ಮತ್ತು ಅತ್ಯಂತ ಹಿಂದುಳಿದವರಲ್ಲಿ ಪ್ರಚಲಿತದಲ್ಲಿರುವ ಭಾವನೆಯನ್ನು ಪ್ರತಿಧ್ವನಿಸುತ್ತವೆ ಎಂದರು.
ಕಳೆದ 20 ವರ್ಷಗಳಲ್ಲಿಯೇ ಅತ್ಯಧಿಕ ದಾಖಲೆಯ ಪ್ರಮಾಣದಲ್ಲಿ ಎನ್‌ಡಿಎ ಗೆಲ್ಲಿಸಲು ಬಿಹಾರದ ಜನರು ಮನಸ್ಸು ಮಾಡಿದ್ದಾರೆ, ಆದರೆ 'ಜಂಗಲ್ ರಾಜ್ ಜನರು' ರಾಜ್ಯದಲ್ಲಿ ಅತ್ಯಂತ ಕೆಟ್ಟ ಸೋಲನ್ನು ಅನುಭವಿಸಲಿದ್ದಾರೆ ಎಂದು ಅವರು ಹೇಳಿದರು.
ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.