ಭಾರತೀಯ ರಾಜಕೀಯದಲ್ಲಿ ವಂಶಪಾರಂಪರ್ಯವನ್ನು ಟೀಕಿಸುವ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಲೇಖನಕ್ಕೆ ಬಿಜೆಪಿ ನಾಯಕರೊಬ್ಬರು ಪ್ರಶಂಸೆ ವ್ಯಕ್ತಪಡಿಸಿದ್ದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಮಾಜಿ ಕಾಂಗ್ರೆಸ್ ನಾಯಕ ಮತ್ತು ಈಗ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ, ತರೂರ್ ಲೇಖನಕ್ಕೆ ಪ್ರತಿಕ್ರಿಯೆ ನೀಡಿದ್ದು, ತರೂರ್ ಅವರನ್ನು "ಖತ್ರೋಂ ಕೆ ಖಿಲಾಡಿ" - ಅಂದರೆ ಅಪಾಯದೊಂದಿಗೆ ಆಟವಾಡುವವನು ಎಂದು ಹೇಳಿದ್ದಾರೆ. ಗಾಂಧಿಯವರ ಬಗ್ಗೆ ಸ್ಪಷ್ಟ ಉಲ್ಲೇಖದಲ್ಲಿ, " ಆ ಕುಟುಂಬವು ತುಂಬಾ ಸೇಡು ತೀರಿಸಿಕೊಳ್ಳುವಂತಿದೆ, ನಿಮಗಾಗಿ ನಾನು ಪ್ರಾರ್ಥಿಸುತ್ತಿರುವುದಾಗಿ ಪೂನವಾಲ್ಲಾ ಹೇಳಿದ್ದಾರೆ.
'ಭಾರತೀಯ ರಾಜಕೀಯ ಕುಟುಂಬ ವ್ಯವಹಾರ' ಎಂಬ ಶೀರ್ಷಿಕೆಯ ಪ್ರಾಜೆಕ್ಟ್ ಸಿಂಡಿಕೇಟ್‌ನಲ್ಲಿ ತರೂರ್ ಅವರ ಲೇಖನ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಲೇಖನ ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ತೃಣಮೂಲ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತೆ ಭಾರತದಲ್ಲಿ ವಂಶಪಾರಂಪರ್ಯ ನೇತೃತ್ವದ ರಾಜಕೀಯ ಪಕ್ಷಗಳ ಮೇಲೆ ಕೇಂದ್ರೀಕರಿಸುತ್ತದೆ.
"ವಂಶಪಾರಂಪರ್ಯ ರಾಜಕೀಯ ಭಾರತೀಯ ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ರಾಜಕೀಯ ಅಧಿಕಾರವನ್ನು ಸಾಮರ್ಥ್ಯ, ಬದ್ಧತೆ ಅಥವಾ ತಳಮಟ್ಟದ ಭಾಗವಹಿಸುವಿಕೆಗಿಂತ ವಂಶಾವಳಿಯಿಂದ ನಿರ್ಧರಿಸಿದಾಗ, ಆಡಳಿತದ ಗುಣಮಟ್ಟವು ನರಳುತ್ತದೆ. ಸಣ್ಣ ಪ್ರತಿಭಾನ್ವಿತ ಗುಂಪಿನಿಂದ ಸೆಳೆಯುವುದು ಎಂದಿಗೂ ಪ್ರಯೋಜನಕಾರಿಯಲ್ಲ, ಆದರೆ ಅಭ್ಯರ್ಥಿಗಳ ಮುಖ್ಯ ಅರ್ಹತೆ ಅವರ ಉಪನಾಮವಾಗಿದ್ದರೆ ಅದು ಸಮಸ್ಯಾತ್ಮಕವಾಗಿರುತ್ತದೆ. ವಾಸ್ತವವಾಗಿ, ರಾಜಕೀಯ ವಂಶಗಳ ಸದಸ್ಯರು ಸಾಮಾನ್ಯ ಜನರು ಎದುರಿಸುವ ಸವಾಲುಗಳಿಂದ ಪ್ರತ್ಯೇಕಿಸಲ್ಪಡುವ ಸಾಧ್ಯತೆಯಿರುವುದರಿಂದ, ಅವರು ತಮ್ಮ ಮತದಾರರ ಅಗತ್ಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ವಿಶೇಷವಾಗಿ ಸಜ್ಜಾಗಿರುವುದಿಲ್ಲ. ಆದರೂ ಕಳಪೆ ಪ್ರದರ್ಶನಕ್ಕಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ" ಎಂದು ಶಶಿ ತರೂರ್ ಬರೆದಿದ್ದರು.
"ಭಾರತ ವಂಶಪಾರಂಪರ್ಯ ರಾಜಕೀಯದಿಂದ ಅರ್ಹತೆಯ ಆಧಾರದಲ್ಲಿ ನಡೆಯುವ ರಾಜಕೀಯಕ್ಕೆ ಬದಲಾಗಬೇಕಾಗಿರುವುದಕ್ಕೆ ಇದು ಸೂಕ್ತ ಸಮಯ ಎಂದು ತರೂರ್ ಅಭಿಪ್ರಾಯಪಟ್ಟಿದ್ದರು. "ಕಾನೂನುಬದ್ಧವಾಗಿ ಕಡ್ಡಾಯ ಅವಧಿಯ ಮಿತಿಗಳನ್ನು ವಿಧಿಸುವುದರಿಂದ ಹಿಡಿದು ಅರ್ಥಪೂರ್ಣ ಆಂತರಿಕ ಪಕ್ಷದ ಚುನಾವಣೆಗಳನ್ನು ಕಡ್ಡಾಯಗೊಳಿಸುವವರೆಗೆ, ಇದಕ್ಕೆ ಮೂಲಭೂತ ಸುಧಾರಣೆಗಳು ಬೇಕಾಗುತ್ತವೆ. ಜೊತೆಗೆ ಅರ್ಹತೆಯ ಆಧಾರದ ಮೇಲೆ ನಾಯಕರನ್ನು ಆಯ್ಕೆ ಮಾಡಲು ಮತದಾರರಿಗೆ ಶಿಕ್ಷಣ ನೀಡುವ ಮತ್ತು ಅಧಿಕಾರ ನೀಡುವ ಸಂಘಟಿತ ಪ್ರಯತ್ನದ ಅಗತ್ಯವಿದೆ. ಭಾರತೀಯ ರಾಜಕೀಯ ಕುಟುಂಬ ಉದ್ಯಮವಾಗಿ ಉಳಿಯುವವರೆಗೆ, ಪ್ರಜಾಪ್ರಭುತ್ವದ ನಿಜವಾದ ಭರವಸೆ - 'ಜನರ ಸರ್ಕಾರ, ಜನರಿಂದ, ಜನರಿಗಾಗಿ' - ಸಂಪೂರ್ಣವಾಗಿ ಸಾಕಾರಗೊಳ್ಳಲು ಸಾಧ್ಯವಿಲ್ಲ" ಎಂದು ಶಶಿ ತರೂರ್ ಬರೆದಿದ್ದರು
ಪೂನವಾಲಾ ಈ ಲೇಖನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಶಶಿ ತರೂರ್ ಬರೆದಿರುವುದು "ತುಂಬಾ ಒಳನೋಟವುಳ್ಳ ಲೇಖನ" ಎಂದು ಬಣ್ಣಿಸಿದ್ದಾರೆ. "ಡಾ. ತರೂರ್ ಇಷ್ಟೊಂದು ಸ್ಪಷ್ಟವಾಗಿ ಮಾತನಾಡಿದ್ದಕ್ಕಾಗಿ ಅವರ ವಿರುದ್ಧ ಯಾವ ಪರಿಣಾಮಗಳು ಉಂಟಾಗುತ್ತವೆ ಎಂದು ಆಶ್ಚರ್ಯ ಚಕಿತನಾಗಿದ್ಡೇನೆ. ಆಪರೇಷನ್ ಸಿಂದೂರ್ ವಿಷಯದಲ್ಲಿ ರಾಹುಲ್ ಗಾಂಧಿಯ ಹೇಳಿಕೆಗಳನ್ನು ಆಕ್ಷೇಪಿಸಿದ್ದಕ್ಕಾಗಿ ಡಾ. ತರೂರ್ ಈಗಾಗಲೇ ದಾಳಿಗೊಳಗಾಗಿದ್ದಾರೆ" ಎಂದು ಅವರು ಹೇಳಿದರು.
ಶಶಿ ತರೂರ್ ಅವರನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿರುವ ಪೂನಾವಾಲಾ, ಸರ್, ನಾನು 2017 ರಲ್ಲಿ ಗಾಂಧಿ ಮನೆತನದ ರಾಹುಲ್ ಗಾಂಧಿಯನ್ನು ಟೀಕಿಸಿದ್ದಕ್ಕಾಗಿ - ನನಗೆ ಏನಾಯಿತು ಎಂದು ನಿಮಗೆ ತಿಳಿದಿದೆ. ಸರ್, ನಿಮಗಾಗಿ ಪ್ರಾರ್ಥಿಸುತ್ತಿದ್ದೇನೆ... ಆ ಕುಟುಂಬವು ತುಂಬಾ ಪ್ರತೀಕಾರದಿಂದ ಕೂಡಿದೆ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಒಂದು ಕಾಲದಲ್ಲಿ ಕಾಂಗ್ರೆಸ್‌ನಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಪೂನವಾಲಾ 2017 ರಲ್ಲಿ ಕಾಂಗ್ರೆಸ್‌ನ ಸಾಂಸ್ಥಿಕ ಸಮೀಕ್ಷೆಗಳನ್ನು "ನಕಲಿ" ಎಂದು ಕರೆದು ಸುದ್ದಿಗಳಲ್ಲಿ ಸ್ಥಾನ ಪಡೆದರು. ನಂತರ ಅವರು ಬಿಜೆಪಿಗೆ ಸೇರಿ ಅದರ ವಕ್ತಾರರಾಗಿ ನೇಮಕಗೊಂಡಿದ್ದಾರೆ.