ಔರಂಗಾಬಾದ್: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ದಾಖಲೆಯ ಮತದಾನವಾಗಿರುವುದು ಜನ "ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರ ಟ್ರ್ಯಾಕ್ ರೆಕಾರ್ಡ್" ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದ್ದಾರೆ.
ಇಂದು ಬಿಹಾರದ ಕೈಮೂರ್ ಜಿಲ್ಲೆಯ ಔರಂಗಾಬಾದ್ ಮತ್ತು ಭಭುವಾದಲ್ಲಿ ಸತತ ಎರಡು ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ಜೆಡಿ(ಯು) ಅಧ್ಯಕ್ಷ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.
ನಿನ್ನೆ ಮೊದಲ ಹಂತದಲ್ಲಿ 121 ಕ್ಷೇತ್ರಗಳಲ್ಲಿ ಮತದಾನವನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, "ನಾನು ಭರವಸೆ ನೀಡಿದ್ದನ್ನು ಮಾಡುತ್ತೇನೆ" ಎಂಬುದಕ್ಕೆ ರಾಮ ಮಂದಿರ ನಿರ್ಮಾಣ, 370ನೇ ವಿಧಿ ರದ್ದು ಮತ್ತು ಆಪರೇಷನ್ ಸಿಂಧೂರ್ ಉದಾಹರಣೆಯಾಗಿ ನೀಡಿದರು.
"ನಿನ್ನೆ, ಬಿಹಾರದ ಮತದಾರರು ಎಲ್ಲಾ ದಾಖಲೆಗಳನ್ನು ಮುರಿದ ಅತಿ ಹೆಚ್ಚು ಮತದಾನ ಮಾಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಇಷ್ಟೊಂದು ಮತದಾನದ ಆಗಿಲ್ಲ. ಇದರ ಹೆಚ್ಚಿನ ಶ್ರೇಯಸ್ಸು ತಾಯಂದಿರು ಮತ್ತು ಸಹೋದರಿಯರಿಗೆ ಸಲ್ಲುತ್ತದೆ, ಅವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನವನ್ನು ಶೇಕಡಾ 65 ಕ್ಕೆ ಏರಿಸಿದರು. ಅವರೆಲ್ಲರೂ ನರೇಂದ್ರ-ನಿತೀಶ್ ಅವರ ಸಾಧನೆಯ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ" ಎಂದು ಮೋದಿ ಹೇಳಿದರು.
ಬಿಹಾರದಲ್ಲಿ ಉತ್ತಮ ಆಡಳಿತ ಖಾತರಿಪಡಿಸುವ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ಮತ ಚಲಾಯಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.