ನವದೆಹಲಿ: ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ರಾಮನಾಥ್ ಗೋಯೆಂಕಾ ಉಪನ್ಯಾಸವನ್ನು ಶ್ಲಾಘಿಸುವ ಮೂಲಕ ಪಕ್ಷದಲ್ಲಿ ಮತ್ತೊಮ್ಮೆ ವಿವಾದ ಹುಟ್ಟುಹಾಕಿದ್ದಾರೆ.
ಕಳೆದ ಮಂಗಳವಾರ X ನಲ್ಲಿ ಪೋಸ್ಟ್ ಮಾಡಲಾದ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅವರು ಪ್ರಧಾನಿಯವರ ಆಲೋಚನೆಗಳು ಶ್ಲಾಘನೀಯವೆಂದು ಭಾವಿಸುವುದಾದರೆ ಕಾಂಗ್ರೆಸ್‌ನಲ್ಲಿ ಏಕೆ ಇದ್ದಾರೆ? ಎಂದು ಪ್ರಶ್ನಿಸಿದ್ದಾರೆ.
"ನಿಮ್ಮ ಪ್ರಕಾರ, ಯಾರಾದರೂ ಕಾಂಗ್ರೆಸ್ ನೀತಿಗಳಿಗೆ ವಿರುದ್ಧವಾಗಿ ದೇಶಕ್ಕೆ ಒಳ್ಳೆಯದನ್ನು ಮಾಡುತ್ತಿದ್ದರೆ, ನೀವು ಆ ನೀತಿಗಳನ್ನು ಅನುಸರಿಸಬೇಕು... ಹಾಗಾದರೆ ನೀವು ಕಾಂಗ್ರೆಸ್‌ನಲ್ಲಿ ಏಕೆ ಇದ್ದೀರಿ? ನೀವು ಸಂಸದರಾಗಿರುವುದರಿಂದ ಮಾತ್ರವೇ? ಬಿಜೆಪಿ ಅಥವಾ ಪ್ರಧಾನಿ ಮೋದಿಯವರ ತಂತ್ರಗಳು ನೀವು ಇರುವ ಪಕ್ಷಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನೀವು ನಿಜವಾಗಿಯೂ ಭಾವಿಸಿದರೆ, ನೀವು ವಿವರಣೆ ನೀಡಬೇಕು. ಇಲ್ಲದಿದ್ದರೆ ನೀವು ಕಪಟಿ" ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು ಶಶಿ ತರೂರ್ ಗೆ ತಿರುಗೇಟು ನೀಡಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಅವರು, ಮೋದಿ ಅವರ ಉಪನ್ಯಾಸದಲ್ಲಿ "ಪ್ರಶಂಸನೀಯ"ವಾದದ್ದು ಏನೂ ಇಲ್ಲ ಎಂದಿದ್ದಾರೆ.
ಕಳೆದ ರಾತ್ರಿ ಇಂಡಿಯನ್ ಎಕ್ಸ್ ಪ್ರೆಸ್ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ರಾಮನಾಥ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದೆ. ಅಲ್ಲಿ ಪ್ರಧಾನಿ "ಅಭಿವೃದ್ಧಿಗೆ ಭಾರತದ ರಚನಾತ್ಮಕ ಅಸಹನೆ ಮತ್ತು ವಸಾಹತುಶಾಹಿ ನಂತರದ ಮನಸ್ಥಿತಿಯ ಕುರಿತು ಮಾತನಾಡಿದರು. ಭಾರತ ಇನ್ನು ಮುಂದೆ ಕೇವಲ 'ಉದಯೋನ್ಮುಖ ಮಾರುಕಟ್ಟೆ' ಅಲ್ಲ, ಆದರೆ ಜಗತ್ತಿಗೆ 'ಉದಯೋನ್ಮುಖ ಮಾದರಿ' ಎಂದು ಪ್ರಧಾನಿ ಒತ್ತಿ ಹೇಳಿದರು ಎಂದು ಶಶಿ ತರೂರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ಎಲ್ಲಾ ಸಂದರ್ಭದಲ್ಲೂ ಚುನಾವಣಾ ಮನಸ್ಥಿತಿಯಲ್ಲಿರುತ್ತಾರೆ ಎಂಬುದು ಸಾಮಾನ್ಯವಾಗಿ ನನ್ನ ವಿರುದ್ಧದ ಆರೋಪವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಅವರು ನಿಜವಾಗಿಯೂ ಜನರ ಸಮಸ್ಯೆಗಳನ್ನು ಪರಿಹರಿಸಲು 'ಭಾವನಾತ್ಮಕ ಮನಸ್ಥಿತಿ'ಯಲ್ಲಿರುತ್ತಾರೆ ಎಂದು ಶಶಿ ತರೂರ್ ಹೇಳಿದ್ದಾರೆ.