ತಿರುವನಂತಪುರ: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂತಥಿಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆಯೊಬ್ಬರ ಹೇಳಿಕೆ ಆಧಾರದ ಮೇಲೆ ಶುಕ್ರವಾರ ವಲಿಯಮಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದ ದೂರುದಾರೆ ರಾಹುಲ್ ಮಮ್‌ಕೂತಥಿಲ್ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ಸಿಎಂ ಭೇಟಿ ಬಳಿಕ ಠಾಣೆಗೆ ಆಗಮಿಸಿದ ಮಹಿಳೆ ಪೊಲೀಸರಿಗೆ ವಿವರವಾಗಿ ಹೇಳಿಕೆ ನೀಡಿ ದೂರು ದಾಖಲಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಬಲವಂತದ ಗರ್ಭಪಾತ ಮತ್ತು ಜೀವ ಬೆದರಿಕೆ ಸಂಬಂಧವಾಗಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಮಹಿಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸಂಪರ್ಕಿಸಿದ ನಂತರ ಮಮ್‌ಕೂಟತಿಲ್ ತಲೆಮರೆಸಿಕೊಂಡಿರುವುದಾಗಿ ವರದಿಯಾಗಿದೆ. ಸದ್ಯ ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಪಾಲಕ್ಕಾಡ್‌ನ ಕಾಂಗ್ರೆಸ್ ನಾಯಕರು ಮತ್ತು ಮಮ್‌ಕೂಟತಿಲ್ ಗುರುವಾರ ಸಂಜೆ ಸುಮಾರು 4 ಗಂಟೆಯವರೆಗೆ ಕನಾಡಿ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದರು. ಅದಾದ ಬಳಿಕ ನಾಪತ್ತೆಯಾಗಿದ್ದಾರೆ.
ಇನ್ನು ಇದಕ್ಕೂ ಮೊದಲು ಪೊಲೀಸ್ ಪ್ರಧಾನ ಕಚೇರಿಗೆ ಬಂದ ಅನಾಮಧೇಯ ಇಮೇಲ್‌ನಲ್ಲಿ ಆಡಿಯೊ ಕ್ಲಿಪ್‌ಗಳು ಮತ್ತು ಸಂದೇಶಗಳ ವಿವರವಿದ್ದು ಇದರ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಆ ಸಂದರ್ಭದಲ್ಲಿ ಮಹಿಳೆ ನೇರವಾಗಿ ದೂರು ನೀಡಿರಲಿಲ್ಲ.
ಎರಡು ದಿನಗಳ ಹಿಂದೆ, ಮತ್ತೊಂದು ಆಡಿಯೊ ಕ್ಲಿಪ್ ಬಿಡುಗಡೆಯಾಗಿದ್ದು, ಇದರಲ್ಲಿ ಶಾಸಕರು ಮಗು ತನಗೂ ಇಷ್ಟ ಎಂದು ಹೇಳಿರುವುದು, ಆದರೆ ನಂತರ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಯನ್ನು ಒತ್ತಾಯಿಸಿರುವುದು ಬಹಿರಂಗವಾಗಿದೆ.
ವಲಿಯಮಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಂತರ ನೇಮಮ್ ಠಾಣೆಗೆ ವರ್ಗಾಯಿಸಲಾಗಿದೆ. ತಿರುವನಂತಪುರಂ ಗ್ರಾಮೀಣ ಎಸ್‌ಪಿ ಎಸ್ ಸುದರ್ಶನ್ ಅವರು ಪ್ರಸ್ತುತ ತನಿಖೆಯ ನೇತೃತ್ವ ವಹಿಸಿದ್ದಾರೆ, ಇದನ್ನು ಅಪರಾಧ ವಿಭಾಗ ಅಥವಾ ಮಹಿಳಾ ಐಪಿಎಸ್ ಅಧಿಕಾರಿ ನೇತೃತ್ವದ ವಿಶೇಷ ತಂಡಕ್ಕೆ ವರ್ಗಾಯಿಸಬಹುದು.