ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ 11 ಮಕ್ಕಳು ಮೃತಪಟ್ಟ ಘಟನೆಗೆ ಮಧ್ಯಪ್ರದೇಶದ ಅಧಿಕಾರಿಗಳು ಚಿಂದ್ವಾರ ಜಿಲ್ಲೆಯಲ್ಲಿ ಒಬ್ಬ ವೈದ್ಯರನ್ನು ಬಂಧಿಸಿದ್ದಾರೆ.
ಪ್ರವೀಣ್ ಸೋನಿ ಎಂಬ ವೈದ್ಯರು ಹಲವಾರು ರೋಗಿಗಳಿಗೆ ಕೋಲ್ಡ್ರಿಫ್ ಸಿರಪ್ ಶಿಫಾರಸು ಮಾಡಿದ ಆರೋಪ ಹೊತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು ಪರಾಸಿಯಾದಲ್ಲಿರುವ ಅವರ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದಿದ್ದರು.
ಕಲುಷಿತ ಸಿರಪ್ ತಯಾರಿಸಿದ ತಮಿಳುನಾಡು ಮೂಲದ ಔಷಧ ಕಂಪನಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಲುಷಿತ ಕೆಮ್ಮಿನ ಸಿರಪ್ ಗೆ ಸಂಬಂಧಿಸಿದಂತೆ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಮತ್ತು ಸ್ಥಳೀಯ ಮಕ್ಕಳ ವೈದ್ಯರ ವಿರುದ್ಧ ಚಿಂದ್ವಾರ ಜಿಲ್ಲೆಯ ಪರಾಸಿಯಾ ಪೊಲೀಸ್ ಠಾಣೆಯಲ್ಲಿ ಇಂದು ಮುಂಜಾನೆ ಎಫ್‌ಐಆರ್ ದಾಖಲಿಸಲಾಗಿದೆ.
ಸೆಪ್ಟೆಂಬರ್ ಆರಂಭದಲ್ಲಿ ಮಕ್ಕಳು ಶೀತ-ಜ್ವರ ಎಂದು ಹೇಳಿಕೊಂಡು ಬಂದಿದ್ದರು. ನಂತರ ಅವರಿಗೆ ಕೆಮ್ಮಿನ ಸಿರಪ್‌ಗಳು ಸೇರಿದಂತೆ ನಿಯಮಿತ ಔಷಧಿಗಳನ್ನು ವೈದ್ಯರು ಸೂಚಿಸಿದ್ದರು. ಆರಂಭದಲ್ಲಿ ಚೇತರಿಸಿಕೊಂಡಂತೆ ಕಂಡುಬರುತ್ತಿದ್ದರು. ನಂತರ ಕೆಲವೇ ದಿನಗಳಲ್ಲಿ, ಮತ್ತೆ ಜ್ವರ-ಶೀತ ಕಾಣಿಸಿಕೊಳ್ಳುತ್ತಿತ್ತು. ನಂತರ ಮೂತ್ರಪಿಂಡ ಸೋಂಕಿನಿಂದ ಮೃತಪಡುತ್ತಿದ್ದರು.
ನಂತರ ಪರೀಕ್ಷಿಸಿದಾಗ ಮೂತ್ರಪಿಂಡ ಬಯಾಪ್ಸಿಗಳು ಡೈಥಿಲೀನ್ ಗ್ಲೈಕೋಲ್ ಮಾಲಿನ್ಯದ ಉಪಸ್ಥಿತಿಯನ್ನು ಬಹಿರಂಗಪಡಿಸಿದವು.
ಇದಾದ ನಂತರ, ತಮಿಳುನಾಡು ಸರ್ಕಾರ ಕೋಲ್ಡ್ರಿಫ್ ಸಿರಪ್ ನ್ನು ನಿಷೇಧಿಸಿತು. ಔಷಧ ನಿಯಂತ್ರಣ, ನಿಯಂತ್ರಣ ಮತ್ತು ಪರವಾನಗಿ ಪ್ರಾಧಿಕಾರದ ಉಪ ನಿರ್ದೇಶಕಿ ಎಸ್ ಗುರುಭಾರತಿ, ರಾಜ್ಯಾದ್ಯಂತ ಎಲ್ಲಾ ಔಷಧ ನಿರೀಕ್ಷಕರಿಗೆ ಔಷಧಾಲಯಗಳು ಕೋಲ್ಡ್ರಿಫ್ ಮಾರಾಟವನ್ನು ತಡೆಗಟ್ಟಲು ಮತ್ತು ಮುಂದಿನ ಆದೇಶದವರೆಗೆ ಲಭ್ಯವಿರುವಲ್ಲೆಲ್ಲಾ ಸಂಗ್ರಹದ ಮಾರಾಟ, ಪೂರೈಕೆ ಸ್ಥಗಿತಗೊಳಿಸಲು ಕೇಳಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪತ್ರಿಕೆಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 7 ರಿಂದ ಮೂತ್ರಪಿಂಡ ವೈಫಲ್ಯದಿಂದಾಗಿ ಒಂಬತ್ತು ಮಕ್ಕಳು ಮೃತಪಟ್ಟ ನಂತರ ಮಧ್ಯಪ್ರದೇಶ ಸರ್ಕಾರವು ಕೋಲ್ಡ್ರಿಫ್ ಸಿರಪ್ ನ್ನು ನಿಷೇಧಿಸಿತು. ಪ್ರಸ್ತುತ, ಚಿಂದ್ವಾರ ಮತ್ತು ನಾಗ್ಪುರದ ಎಂಟು ಮಕ್ಕಳು ಸೇರಿದಂತೆ 13 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳ ರಾಜ್ಯವು ಕೋಲ್ಡ್ರಿಫ್ ಸಿರಪ್ ಮಾರಾಟವನ್ನು ಸ್ಥಗಿತಗೊಳಿಸಿದೆ.