ಮಾಲ್ಡಾ: ಪಶ್ಚಿಮ ಬಂಗಾಳದ ಬಾಂಗ್ಲಾದೇಶದೊಂದಿಗಿನ ಅಂತರರಾಷ್ಟ್ರೀಯ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆ ತಡೆಯಲು ಯತ್ನಿಸಿದ 59 ವರ್ಷದ ಗಡಿ ಭದ್ರತಾ ಪಡೆ(ಬಿಎಸ್ಎಫ್) ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 4 ರ ಮಧ್ಯರಾತ್ರಿ ರಾಜ್ಯದ ಮಾಲ್ಡಾ ಜಿಲ್ಲೆಯ ಬಿಎಸ್‌ಎಫ್‌ನ ಆಗ್ರಾ ಗಡಿ ಹೊರಠಾಣೆ(ಬಿಒಪಿ) ಬಳಿ ನಡೆದ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.
ಭಾರತದಿಂದ ಬಾಂಗ್ಲಾದೇಶಕ್ಕೆ ಜಾನುವಾರು ಕಳ್ಳಸಾಗಣೆದಾರರು ಅಕ್ರಮವಾಗಿ ಎಮ್ಮೆಗಳನ್ನು ಸಾಗಿಸಲು ಯತ್ನಿಸುತ್ತಿರುವುದನ್ನು ಸೈನಿಕರು ಹಾಗೂ ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಕಪಿಲ್ ದಿಯೋ ಸಿಂಗ್ ಅವರು ಗಮನಿಸಿದರು ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಕಳ್ಳಸಾಗಣೆದಾರರನ್ನು ತಡೆಯಲು ಸೈನಿಕರು ತಮ್ಮ ಪಂಪ್ ಆಕ್ಷನ್ ಗನ್‌ನಿಂದ ಮಾರಕವಲ್ಲದ ಮೂರು ಸುತ್ತು ಗುಂಡು ಹಾರಿಸಿದರು. ಆದರೆ ಅವರು ಭದ್ರತಾ ಸಿಬ್ಬಂದಿಯ ಮೇಲೆ 'ಡಾಹ್' (ದೊಡ್ಡ ಚಾಕು) ಮತ್ತು ಕೋಲುಗಳಂತಹ ತೀಕ್ಷ್ಣವಾದ ಆಯುಧಗಳಿಂದ ದಾಳಿ ಮಾಡಿದರು. ನಂತರ ಬಿಎಸ್ಎಫ್ ನ 88ನೇ ಬೆಟಾಲಿಯನ್‌ಗೆ ಸೇರಿದ ಇನ್ಸ್‌ಪೆಕ್ಟರ್ ಸಿಂಗ್, ಕಳ್ಳಸಾಗಣೆದಾರರನ್ನು ಬೆನ್ನಟ್ಟಿ ಓಡುತ್ತಿದ್ದಾಗ ಅವರು ಜೌಗು ಮತ್ತು ನೀರು ತುಂಬಿದ ಜಾಗದಲ್ಲಿ ಜಾರಿಬಿದ್ದು, ಪ್ರಜ್ಞೆ ತಪ್ಪಿದರು.
ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಇನ್ಸ್‌ಪೆಕ್ಟರ್‌ಗೆ ಯಾವುದೇ ಬಾಹ್ಯ ಗಾಯಗಳಾಗಿಲ್ಲ ಮತ್ತು ಅವರ ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.