ನವದೆಹಲಿ: ವಿಶ್ವಸಂಸ್ಥೆಯ ಅನುಮೋದನೆ ಪಡೆದ ಅಫ್ಘಾನಿಸ್ತಾನದ ವಿದೇಶಾಂಗ ಸಚಿವರು ಒಂದು ವಾರದ ಭೇಟಿಗಾಗಿ ಭಾರತಕ್ಕೆ ಬಂದಿಳಿದಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪ್ರಯಾಣ ವಿನಾಯಿತಿ ನೀಡಿದ ನಂತರ ಅಮೀರ್ ಖಾನ್ ಮುತ್ತಾಕಿ ಅವರ ಪ್ರವಾಸ ಸಾಧ್ಯವಾಗಿದೆ. ಇದು 2021 ರಲ್ಲಿ ಅಮೆರಿಕ ತನ್ನ ನೇತೃತ್ವದ ಪಡೆಗಳನ್ನು ಹಿಂತೆಗೆದುಕೊಂಡ ಬೆನ್ನಲ್ಲೆ ಅಧಿಕಾರಕ್ಕೆ ಮರಳಿದ ನಂತರ ಉನ್ನತ ತಾಲಿಬಾನ್ ನಾಯಕರೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿಯಾಗಿದೆ.
ತಮ್ಮ ಪ್ರವಾಸದ ಸಮಯದಲ್ಲಿ, ಅಫ್ಘಾನ್ ಸಚಿವರು ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಪ್ರಾದೇಶಿಕ ರಾಜತಾಂತ್ರಿಕತೆಗೆ ಈ ಭೇಟಿ ನಿರ್ಣಾಯಕ ಸಮಯದಲ್ಲಿ ಬಂದಿದೆ. ಭಾರತ ಕಾಬೂಲ್‌ನಲ್ಲಿ ತಾಲಿಬಾನ್ ಸರ್ಕಾರದೊಂದಿಗೆ ತನ್ನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ನೋಡುತ್ತಿರುವುದರಿಂದ ಪಾಕಿಸ್ತಾನ ಈ ಭೇಟಿಯನ್ನು ಸೂಕ್ಷ್ಮವಾಗಿ ಗಮನಿಸುವ ನಿರೀಕ್ಷೆಯಿದೆ.
ಸೌತ್ ಬ್ಲಾಕ್ ದ್ವಿಪಕ್ಷೀಯ ಮಾತುಕತೆಗಳಿಗೆ ಸಿದ್ಧವಾಗುತ್ತಿದ್ದಂತೆ, ಅಧಿಕಾರಿಗಳಿಗೆ ಧ್ವಜದ ಸಂದಿಗ್ಧತೆ ಎದುರಾಗಿದೆ. ರಾಜತಾಂತ್ರಿಕ ಶಿಷ್ಟಾಚಾರದ ಪ್ರಕಾರ, ದೇಶಕ್ಕೆ ಭೇಟಿ ನೀಡುವ ನಾಯಕನ ದೇಶದ ಧ್ವಜದ ಪಕ್ಕದಲ್ಲಿ - ಅವರ ಹಿಂದೆ ಮತ್ತು/ಅಥವಾ ಮೇಜಿನ ಮೇಲೆ ಭಾರತೀಯ ಧ್ವಜವನ್ನು ಹಾಕಲಾಗುತ್ತದೆ.
ಭಾರತ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯನ್ನು ಗುರುತಿಸದ ಕಾರಣ, ತಾಲಿಬಾನ್ ಧ್ವಜಕ್ಕೂ ಅಧಿಕೃತ ಸ್ಥಾನಮಾನ ನೀಡಿಲ್ಲ. ಇಲ್ಲಿಯವರೆಗೆ, ನವದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿಯಲ್ಲಿ, ತಾಲಿಬಾನ್ ನ ಅಧಿಕೃತ ಧ್ವಜವಾಗಿರುವ ಇಸ್ಲಾಮಿಕ್ ನಂಬಿಕೆಯ ಶಹಾದಾ ಘೋಷಣೆಯ ಕಪ್ಪು ಪದಗಳನ್ನು ಹೊಂದಿರುವ ಸಾದಾ ಬಿಳಿ ಬಟ್ಟೆಯ ಧ್ವಜವನ್ನು ಹಾರಿಸುವುದಕ್ಕೆ ನವದೆಹಲಿ ಅನುಮತಿಸಿಲ್ಲ. ರಾಯಭಾರ ಕಚೇರಿ ಇನ್ನೂ ಅಫ್ಘಾನಿಸ್ತಾನದ ಇಸ್ಲಾಮಿಕ್ ಗಣರಾಜ್ಯದ ಹಳೆಯ ಧ್ವಜವನ್ನು ಹಾರಿಸುತ್ತದೆ. ಅದು ಪದಚ್ಯುತಗೊಂಡ ಅಧ್ಯಕ್ಷ ಅಶ್ರಫ್ ಘನಿ ಅವರ ಆಡಳಿತಾವಧಿಯಲ್ಲಿ ಅಧಿಕೃತವಾಗಿತ್ತು.
ಭಾರತೀಯ ಅಧಿಕಾರಿಗಳು ಮತ್ತು ಮುತ್ತಾಕಿ ನಡುವಿನ ಹಿಂದಿನ ಸಭೆಯ ಸಮಯದಲ್ಲಿ, ಕಾಬೂಲ್ ತಾಲಿಬಾನ್ ಧ್ವಜವನ್ನು ಬಳಸಿತ್ತು. ಈ ವರ್ಷದ ಆರಂಭದಲ್ಲಿ ದುಬೈನಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಮುತ್ತಾಕಿ ಅವರೊಂದಿಗಿನ ಭೇಟಿಯ ಸಮಯದಲ್ಲಿ, ಅಧಿಕಾರಿಗಳು ತ್ರಿವರ್ಣ ಧ್ವಜ ಅಥವಾ ತಾಲಿಬಾನ್ ಧ್ವಜವನ್ನು ಇಡದೆ ಸಮಸ್ಯೆಯನ್ನು ಪರಿಹರಿಸಿದ್ದರು. ಆದರೆ ಈ ಬಾರಿ, ಸಭೆ ದೆಹಲಿಯಲ್ಲಿ ನಡೆಯುತ್ತಿದ್ದು ಈ ವಿಷಯವು ಅಧಿಕಾರಿಗಳಿಗೆ ರಾಜತಾಂತ್ರಿಕ ಸವಾಲಾಗಿ ಪರಿಣಮಿಸುತ್ತಿದೆ.
ಐತಿಹಾಸಿಕವಾಗಿ, ಭಾರತ ಮತ್ತು ಅಫ್ಘಾನಿಸ್ತಾನ ಸ್ನೇಹ ಸಂಬಂಧಗಳನ್ನು ಹೊಂದಿದ್ದ ರಾಷ್ಟ್ರಗಳಾಗಿವೆ. ಆದರೆ 2021 ರಲ್ಲಿ ಯುಎಸ್ ಹಿಂದೆ ಸರಿದ ನಂತರ ಮತ್ತು ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ನವದೆಹಲಿ ಕಾಬೂಲ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿತು. ವ್ಯಾಪಾರ, ವೈದ್ಯಕೀಯ ಬೆಂಬಲ ಮತ್ತು ಮಾನವೀಯ ಸಹಾಯವನ್ನು ಸುಗಮಗೊಳಿಸಲು ಭಾರತವು ಒಂದು ವರ್ಷದ ನಂತರ ಒಂದು ಸಣ್ಣ ಕಾರ್ಯಾಚರಣೆಯನ್ನು ನಡೆಸಿತ್ತು.
ಭಾರತ ಅಧಿಕೃತವಾಗಿ ತಾಲಿಬಾನ್ ಸರ್ಕಾರವನ್ನು ಗುರುತಿಸುವುದಿಲ್ಲ ಆದರೆ ಆಯಾ ವಿದೇಶಾಂಗ ಸಚಿವಾಲಯಗಳಲ್ಲಿನ ಹಿರಿಯ ಅಧಿಕಾರಿಗಳ ನಡುವಿನ ಸಭೆಗಳು ಮತ್ತು ಮಾತುಕತೆಗಳೊಂದಿಗೆ ಸಂಬಂಧವನ್ನು ಸುಧಾರಿಸಲು ತಾತ್ಕಾಲಿಕ ಕ್ರಮಗಳನ್ನು ತೆಗೆದುಕೊಂಡಿದೆ.
ಮುತ್ತಾಕಿ ಅವರ ಭಾರತ ಭೇಟಿ ಕಾಬೂಲ್‌ನಲ್ಲಿ ಸ್ಥಾಪಿಸಲಾದ ತಾಲಿಬಾನ್‌ನೊಂದಿಗಿನ ಭಾರತದ ಸಂಬಂಧಗಳಿಗೆ ಹೊಸ ಆಯಾಮವನ್ನು ನೀಡುವ ನಿರೀಕ್ಷೆಯಿದೆ. "ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾಲಿಬಾನ್ ಆಡಳಿತಕ್ಕೆ ಆಯಕಟ್ಟಿನ ಬಾಗ್ರಾಮ್ ವಾಯುನೆಲೆಯನ್ನು ಹಸ್ತಾಂತರಿಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನದಲ್ಲಿ ವಿದೇಶಿ ಮಿಲಿಟರಿ ಮೂಲಸೌಕರ್ಯವನ್ನು ನಿಯೋಜಿಸುವ ಪ್ರಯತ್ನಗಳನ್ನು ವಿರೋಧಿಸಲು ರಷ್ಯಾ, ಚೀನಾ ಮತ್ತು ಇತರ ಏಳು ರಾಷ್ಟ್ರಗಳೊಂದಿಗೆ ಭಾರತವು ಕೆಲವು ದಿನಗಳ ನಂತರ ಈ ಕ್ರಮ ಕೈಗೊಂಡಿದೆ. ಸಭೆಯ ನಂತರ, ಈ ದೇಶಗಳು ಹೇಳಿಕೆಯಲ್ಲಿ, ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಲ್ಲಿ ಅಫ್ಘಾನಿಸ್ತಾನದ ಸಕ್ರಿಯ ಏಕೀಕರಣವನ್ನು ಬೆಂಬಲಿಸುವುದಾಗಿ ತಿಳಿಸಿವೆ."
ಯಾವುದೇ ದೇಶದ ವಿರುದ್ಧ ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಅಫ್ಘಾನ್ ಮಣ್ಣನ್ನು ಬಳಸಬಾರದು ಎಂದು ಭಾರತ ಇದೇ ವೇಳೆ ಒತ್ತಾಯಿಸಿದೆ.
ಮೇ 15 ರಂದು ಕಾಬೂಲ್ ಆಡಳಿತ ಪಹಲ್ಘಾನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿತ್ತು. ಆಪರೇಷನ್ ಸಿಂದೂರ್ ನಂತರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮುತ್ತಾಕಿ ಭೇಟಿ ನಡೆದಿತ್ತು. ಜನವರಿಯಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಮುತ್ತಕಿ ನಡುವಿನ ಮಾತುಕತೆಯ ನಂತರ ತಾಲಿಬಾನ್ ಆಡಳಿತ ಭಾರತವನ್ನು "ಪ್ರಮುಖ" ಪ್ರಾದೇಶಿಕ ಮತ್ತು ಆರ್ಥಿಕ ಶಕ್ತಿ ಎಂದು ಬಣ್ಣಿಸಿತ್ತು.