ನವದೆಹಲಿ: ಸದ್ಯ ರೈಸ್ ಅಂಡ್ ಫಾಲ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವ ಧನಶ್ರೀ ವರ್ಮಾ ಮತ್ತೊಮ್ಮೆ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಪಾಡ್‌ಕಾಸ್ಟ್‌ನಲ್ಲಿ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ವಿಚ್ಛೇದನದ ಕುರಿತು ಮಾತನಾಡಿದ ನಂತರ ಧನಶ್ರೀ ಮತ್ತೊಂದು ಪಾಡ್‌ಕಾಸ್ಟ್‌ನಲ್ಲಿ, ಮದುವೆ ಎಂಬುದರ ಮೇಲಿನ ಗೌರವದಿಂದಾಗಿ ತಾನು ಮೊದಲೇ ಮೌನವಾಗಿರಲು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದರು.
'ನೀವು ಮದುವೆಯಾದಾಗ, ಇನ್ನೊಬ್ಬ ವ್ಯಕ್ತಿಯ ಗೌರವವೂ ನಿಮ್ಮ ಕೈಯಲ್ಲಿದೆ ಎಂಬ ಜವಾಬ್ದಾರಿ ನಿಮ್ಮದಾಗಿರುತ್ತದೆ. ನಾನು ಬಯಸಿದರೆ, ಅಗೌರವವನ್ನು ತೋರಿಸಬಹುದಿತ್ತು. ಒಬ್ಬ ಮಹಿಳೆಯಾಗಿ ನನಗೆ ಹೇಳಲು ಏನೂ ಇಲ್ಲ ಎಂದು ನೀವು ಭಾವಿಸುತ್ತೀರಿ. ಆದರೆ, ಅವರು ನನ್ನ ಪತಿಯಾಗಿದ್ದರು. ನಾನು ಮದುವೆಯಾದಾಗಲೂ ಗೌರವಿಸಿದೆ ಮತ್ತು ನಾನು ಮದುವೆಯಾಗಿದ್ದೆ ಎಂಬ ಕಾರಣಕ್ಕೆ ಈಗಲೂ ನಾನು ಅವರನ್ನು ಗೌರವಿಸುತ್ತೇನೆ' ಎಂದು ಹೇಳಿದರು.
ಚಾಹಲ್ ತನ್ನ ವಿಚ್ಛೇದನದ ಅಂತಿಮ ವಿಚಾರಣೆಯ ದಿನದಂದು 'ಬಿ ಯುವರ್ ಓನ್ ಶುಗರ್ ಡ್ಯಾಡಿ' ಎಂದು ಬರೆದ ಟಿ-ಶರ್ಟ್ ಧರಿಸಿದ್ದರು.
ಈ ಕುರಿತು ಮಾತನಾಡಿದ ಧನಶ್ರೀ, 'ನನಗೆ ಸಕ್ಕರೆ ಇಷ್ಟವಿಲ್ಲ ಎಂದು ಜನರು ತಿಳಿದುಕೊಳ್ಳಬೇಕಾದ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ಸಕ್ಕರೆಯನ್ನು ತ್ಯಜಿಸಿದ್ದೇನೆ. ಜನರು ನನ್ನನ್ನು ಇಲ್ಲಿ ಮತ್ತು ಅಲ್ಲಿ ಬಹಳಷ್ಟು ಹೆಸರುಗಳಿಂದ ಟ್ಯಾಗ್ ಮಾಡಿದ್ದಾರೆ. ಲೋಗೋನ್ ಕೋ ಕುಚ್ ಪತಾ ಹೀ ನಹಿ ಹೈ ಮೇರೆ ಬಾರೇ ಮೇ' ಎಂದರು.
ಆದರೆ, ಈಗ ಸಕ್ಕರೆ ಸೇವನೆ ಬಿಟ್ಟಿದ್ದರೂ, ಹಣವನ್ನು ಬಿಟ್ಟಿಲ್ಲ ಎಂದು ಧನಶ್ರೀ ಒಪ್ಪಿಕೊಂಡರು. 'ಪೈಸಾ ತೋ ಬಹುತ್ ಮುಖ್ಯ ಹೈ, (ಹಣ ಬಹಳ ಮುಖ್ಯ) ಯಾರಿಗೆ ಹಣ ಬೇಡ? ಎಂದರು.
ಇದಕ್ಕೂ ಮೊದಲು, ಹ್ಯೂಮನ್ಸ್ ಆಫ್ ಬಾಂಬೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ, 'ಜನರು ನಿಮ್ಮನ್ನು ದೂಷಿಸುತ್ತಾರೆಂದು ನಿಮಗೆ ತಿಳಿದಿದೆ. ಈ ಟಿ-ಶರ್ಟ್ ಸ್ಟಂಟ್ ನಡೆದಿದೆ ಎಂದು ನನಗೆ ತಿಳಿಯುವ ಮೊದಲೇ, ಜನರು ಇದಕ್ಕೆ ನನ್ನನ್ನು ದೂಷಿಸುತ್ತಾರೆಂದು ನಮಗೆಲ್ಲರಿಗೂ ತಿಳಿದಿತ್ತು. ತಮ್ಮ ವಿಚ್ಛೇದನದ ಬಗ್ಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡುವ ಬದಲು (ಅವರು ಮಾತನಾಡಲು ಬಯಸಿದರೆ) ಖಾಸಗಿಯಾಗಿ ಹೇಳಬಹುದಿತ್ತು' ಎಂದು ಧನಶ್ರೀ ಹೇಳಿಕೊಂಡಿದ್ದಾರೆ.
18 ತಿಂಗಳು ಪ್ರತ್ಯೇಕವಾಗಿ ವಾಸಿಸಿದ ನಂತರ, ಯುಜ್ವೇಂದ್ರ ಮತ್ತು ಧನಶ್ರೀ ಮಾರ್ಚ್ 20, 2025 ರಂದು ಅಧಿಕೃತವಾಗಿ ಬೇರ್ಪಟ್ಟರು.