ಚುರಾಚಾಂದ್‌ಪುರ: ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡಿದ ಮಾರನೇ ದಿನವೇ ಚುರಾಚಾಂದ್‌ಪುರ ಜಿಲ್ಲೆಯಲ್ಲಿ ಗುಂಪೊಂದು ಕುಕಿ ನಾಯಕನ ಮನೆಗೆ ಬೆಂಕಿ ಹಚ್ಚಿದ್ದು, ಉದ್ವಿಗ್ನ ಪರಿಸ್ಥಿತಿ ಇದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕುಕಿ ರಾಷ್ಟ್ರೀಯ ಸಂಘಟನೆ(ಕೆಎನ್‌ಒ) ನಾಯಕ ಕ್ಯಾಲ್ವಿನ್ ಐಖೆಂಥಂಗ್ ಅವರ ನಿವಾಸವನ್ನು ಭಾನುವಾರ ತಡರಾತ್ರಿ ಸುಟ್ಟುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಚುರಾಚಾಂದ್‌ಪುರದ ಸ್ಥಳೀಯರ ಒಂದು ಗುಂಪು, ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿಕೊಂಡಿದೆ.
ಕೆಎನ್‌ಒ, ಕೇಂದ್ರ ಸರ್ಕಾರದೊಂದಿಗಿನ ಕಾರ್ಯಾಚರಣೆಗಳ ಅಮಾನತು(ಎಸ್‌ಒಒ) ಒಪ್ಪಂದಕ್ಕೆ ಸಹಿ ಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ಸಂಘರ್ಷ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಒಂದು ದಿನದ ನಂತರ ಈ ದಾಳಿ ನಡೆದಿದೆ.
ಕುಕಿ ಝೋ ಕೌನ್ಸಿಲ್(ಕೆಜೆಡ್‌ಸಿ) ಮತ್ತು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ(ಐಟಿಎಲ್‌ಎಫ್) ವಕ್ತಾರರಾಗಿರುವ ಮತ್ತೊಬ್ಬ ಕುಕಿ ನಾಯಕಿ ಗಿಂಜಾ ವುಲ್‌ಜಾಂಗ್ ಅವರ ನಿವಾಸಕ್ಕೂ ಸಹ ದುಷ್ಕರ್ಮಿಗಳು ಬೆಂಕಿ ಹಚ್ಚಲು ಯತ್ನಿಸಿದರು. ಆದರೆ ಸ್ಥಳೀಯರ ಸಕಾಲಿಕ ಮಧ್ಯ ಪ್ರವೇಶದ ನಂತರ ಮನೆಗೆ ಬೆಂಕಿ ಹಚ್ಚುವುದನ್ನು ತಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 4 ರಂದು, ಎರಡು ಪ್ರಮುಖ ಕುಕಿ-ಝೋ ಗುಂಪುಗಳು ಕೇಂದ್ರದೊಂದಿಗೆ ಮರು-ಮಾತುಕತೆಯ ನಿಯಮಗಳು ಮತ್ತು ಷರತ್ತುಗಳ ಕುರಿತು SoO ಒಪ್ಪಂದಕ್ಕೆ ಸಹಿ ಹಾಕಿದವು. ಅದರ ಅಡಿಯಲ್ಲಿ ಅವರು ಮಣಿಪುರದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಲು, ಗೊತ್ತುಪಡಿಸಿದ ಶಿಬಿರಗಳನ್ನು ದುರ್ಬಲ ಪ್ರದೇಶಗಳಿಂದ ದೂರ ಸ್ಥಳಾಂತರಿಸಲು ಮತ್ತು ರಾಜ್ಯಕ್ಕೆ ಶಾಶ್ವತ ಶಾಂತಿ ಮತ್ತು ಸ್ಥಿರತೆ ತರುವತ್ತ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ.