ಗುವಾಹಟಿ: ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟ ಗಾಯಕ ಜುಬೀನ್ ಗರ್ಗ್(52) ಅವರ ಪಾರ್ಥಿವ ಶರೀರವನ್ನು ಶನಿವಾರ ದೆಹಲಿಯಲ್ಲಿ ಸ್ವೀಕರಿಸಿ, ಗುವಾಹಟಿಗೆ ಕೊಂಡೊಯ್ಯುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ಗಾಯಕನ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ಗುವಾಹಟಿಗೆ ತರಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.
ಇಂದು ತಡರಾತ್ರಿ ಮೃತದೇಹವನ್ನು ಸ್ವೀಕರಿಸಲು ದೆಹಲಿಗೆ ತೆರಳುವುದಾಗಿ ಅಸ್ಸಾಂ ಮುಖ್ಮಮಂತ್ರಿ ಹೇಳಿದ್ದಾರೆ.
"ಸಿಂಗಾಪುರದಿಂದ ಆಗಮಿಸುವ ನಮ್ಮ ಪ್ರೀತಿಯ ಜುಬೀನ್ ಅವರ ಪಾರ್ಥಿವ ಶರೀರವನ್ನು ಸ್ವೀಕರಿಸಲು ನಾನು ಇಂದು ತಡರಾತ್ರಿ ದೆಹಲಿಗೆ ಹೋಗುತ್ತೇನೆ. ಅಲ್ಲಿಂದ ಭಾನುವಾರ ಬೆಳಗ್ಗೆ 6 ಗಂಟೆಯೊಳಗೆ ಮೃತದೇಹವನ್ನು ಗುವಾಹಟಿಗೆ ತರುತ್ತೇವೆ" ಎಂದು ಸಿಎಂ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾರ್ಗ್ ಅವರ ಪಾರ್ಥಿವ ಶರೀರ ಶನಿವಾರ ರಾತ್ರಿ ದೆಹಲಿಗೆ ಆಗಮಿಸಲಿದ್ದು, ಭಾನುವಾರ ಬೆಳಿಗ್ಗೆ ಗುವಾಹಟಿಗೆ ಆಗಮಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಯಾ ಅಲಿ" ಖ್ಯಾತಿಯ ಗಾಯಕ ಸಿಂಗಾಪುರದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಸಿಂಗಾಪುರದಲ್ಲಿರುವ ಭಾರತೀಯ ಹೈಕಮಿಷನ್ ಮತ್ತು ಗಾಯಕನ ಜೊತೆಗಿದ್ದ ತಂಡದ ಸದಸ್ಯರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ಗುವಾಹಟಿಯ ಸರುಸಜೈ ಕ್ರೀಡಾ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕಾಗಿ ಗಾರ್ಗ್ ಅವರ ಪಾರ್ಥಿವ ಶರೀರವನ್ನು ಇಡಲಾಗುವುದು ಎಂದು ಅಸ್ಸಾಂ ಸಿಎಂ ತಿಳಿಸಿದ್ದಾರೆ.
ಮೂರು ದಿನ ಶೋಕಾಚರಣೆ
ಗಾಯಕ ಜುಬೀನ್ ಗಾರ್ಗ್ ಅವರ ನಿಧನಕ್ಕೆ ಅಸ್ಸಾಂ ಸರ್ಕಾರ ಶನಿವಾರದಿಂದ ಮೂರು ದಿನ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕೋಟಾ ಅವರು ಎಕ್ಸ್‌ನಲ್ಲಿ ಈ ಘೋಷಣೆ ಮಾಡಿದ್ದಾರೆ. "ಖ್ಯಾತ ಗಾಯಕ, ಚಲನಚಿತ್ರ ನಿರ್ಮಾಪಕ ಜುಬೀನ್ ಗಾರ್ಗ್ ಅವರ ನಿಧನಕ್ಕೆ ಅಸ್ಸಾಂ ಸರ್ಕಾರ ತೀವ್ರ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸುತ್ತದೆ" ಎಂದು ಅವರು ಹೇಳಿದ್ದಾರೆ.