ಚೆನ್ನೈ: ಶನಿವಾರವಷ್ಟೇ ಹೊರ ಬರುವ ರಾಜಕಾರಣಿ ನಾನಲ್ಲ ಎಂದು ಹೇಳುವ ಮೂಲಕ ನಟ, ರಾಜಕಾರಣಿ ವಿಜಯ್ ವಿರುದ್ಧ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಶನಿವಾರ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಡಿಎಂಕೆಯ ಮುಪ್ಪೆರುಮ್ ವಿಝಾ ಅಂಗವಾಗಿ ಚೆನ್ನೈ ಪೂರ್ವ ಜಿಲ್ಲಾ ಘಟಕ ಆಯೋಜಿಸಿದ್ದ ಪಕ್ಷದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್ ಅವರು, ವಾರದಲ್ಲಿ ಕನಿಷ್ಠ ನಾಲ್ಕು ಅಥವಾ ಐದು ದಿನ ನಾನು ಕಚೇರಿಯಿಂದ ಹೊರಗೆ ಇರುತ್ತೇನೆ. ಶನಿವಾರ ಮಾತ್ರ ನಾನು ಆಚೆ ಬರುವವನಲ್ಲ. ಭಾನುವಾರವೂ ಸಹ ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.
2023 ಸೆಪ್ಟೆಂಬರ್ನಲ್ಲಿ ಮಗಳಿರ್ ಉರಿಮೈತಿತ್ತಂ ಪ್ರಾರಂಭವಾದಾಗಿನಿಂದ ಇಲ್ಲಿವರೆಗೂ 1.20 ಕೋಟಿ ಮಹಿಳೆಯರು ತಲಾ 24,000 ರೂ.ಗಳನ್ನು ಪಡೆದಿದ್ದಾರೆ. ಹಾಗೆಯೇ ಯೋಜನೆಯಲ್ಲಿ ಇನ್ನೆರಡು ತಿಂಗಳಲ್ಲಿ ಹೆಚ್ಚಿನ ಮಹಿಳೆಯರು 1,000 ರೂ.ಗಳ ಈ ಸಹಾಯವನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಈ ಯೋಜನೆ ಪಡೆದ ಮಹಿಳೆಯರೊಂದಿಗೆ ನಡೆಸಿದ ಸಂವಾದದಲ್ಲಿ ಶೇ. 90ರಷ್ಟು ಮಹಿಳೆಯರು ಈ ಮೊತ್ತವನ್ನು ವೈದ್ಯಕೀಯ ವೆಚ್ಚ, ಮಕ್ಕಳು, ಮೊಮ್ಮಕ್ಕಳ ಶೈಕ್ಷಣಿಕ ವೆಚ್ಚಗಳಿಗೆ ಬಳಸಿದ್ದು, ಬಹಳಷ್ಟು ಉಪಕಾರಿಯಾಗಿದೆ ಎಂದು ಹೇಳಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲಾಗಿದೆ ಎಂಬ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹೇಳಿಕೆಯನ್ನು ಅಪಹಾಸ್ಯ ಮಾಡಿದ ಅವರು, 8 ವರ್ಷಗಳ ಹಿಂದೆ ಜಿಎಸ್‌ಟಿ ದರವನ್ನು ಹೆಚ್ಚಿಸಿದ್ದು ಬಿಜೆಪಿ ಸರ್ಕಾರ, ಮತ್ತು ಡಿಎಂಕೆ ಈ ಎಲ್ಲಾ ವರ್ಷಗಳಿಂದ ಇದರ ವಿರುದ್ಧ ಧ್ವನಿ ಎತ್ತಿದೆ. ಬಿಜೆಪಿ ಬೇರೆಡೆ ವಾಸಿಸುವ ಜನರನ್ನು ವಂಚಿಸಬಹುದು, ಆದರೆ ತಮಿಳುನಾಡಿನ ಜನರನ್ನು ಅಲ್ಲ. ಕಳೆದ ಎಂಟು ವರ್ಷಗಳಲ್ಲಿ ತಮಿಳುನಾಡಿನ ಜನರು ಜಿಎಸ್‌ಟಿಗೆ 55 ಲಕ್ಷ ಕೋಟಿ ರೂ. ಪಾವತಿಸಿದ್ದಾರೆ. ಕೇಂದ್ರ ಸರ್ಕಾರ ಆ ಮೊತ್ತವನ್ನು ಜನರಿಗೆ ಮರುಪಾವತಿಸಿದೆಯೇ? ಎಂದು ವಾಗ್ದಾಳಿ ನಡೆಸಿದರು. ಬಳಿಕ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ.ಪಳನಿಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದರು.