ನವದೆಹಲಿ: ಭಾನುವಾರ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ' ಭಾರತದ ಗೆಲುವು' ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಫೈಟ್ ಗೆ ಕಾರಣವಾಗಿದೆ.
ಪಾಕಿಸ್ತಾನ ಸೋತಿದ್ದರಿಂದ ಕಾಂಗ್ರೆಸ್ ನಾಯಕರಿಗೆ ಹೆಚ್ಚಿನ ನೋವಾಗಿರುವಂತೆ ಕಾಣುತ್ತಿದ್ದಾರೆ. 'ಆಪರೇಷನ್ ಸಿಂಧೂರ್' ಭೀಕರ ದಾಳಿಗೆ ಭಾರತೀಯ ಸೇನೆಯನ್ನು ಕಾಂಗ್ರೆಸ್ ಅಭಿನಂದಿಸಿರಲಿಲ್ಲ. ಅದೇ ರೀತಿ ಈಗ ಕ್ರಿಕೆಟ್ ನಲ್ಲಿ ಗೆದ್ದಿರುವ ಭಾರತ ತಂಡವನ್ನು ಅಭಿನಂದಿಸಿಲ್ಲ ಎಂದು ಬಿಜೆಪಿ ಹೇಳಿದೆ. ಫೈನಲ್ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ ದಾಖಲೆಯ ಒಂಬತ್ತನೇ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಅಭಿನಂದಿಸಿದ ಟ್ವೀಟ್ ಮಾಡದ ಕಾಂಗ್ರೆಸ್ ನಾಯಕರು:
ಟೂರ್ನಿಯಲ್ಲಿ ಮೂರು ಬಾರಿ ಪಾಕಿಸ್ತಾನವನ್ನು ಸೋಲಿಸಿ ಏಷ್ಯಾಕಪ್ ತಂದ ನಮ್ಮ ರಾಷ್ಟ್ರೀಯ ತಂಡವನ್ನು ಅಭಿನಂದಿಸಿ ಯಾವುದೇ ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಲ್ಲ ಎಂದು ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅದ್ಭುತ ಗೆಲುವು ಸಾಧಿಸಿರುವುದು ರಾಹುಲ್ ಗಾಂಧಿ ಮತ್ತು ಇಡೀ ಕಾಂಗ್ರೆಸ್ ನ್ನು ಕೋಮಾ ಸ್ಥಿತಿಗೆ ತಳ್ಳಿದೆ ಎಂದು ಅವರು ಹೇಳಿದ್ದಾರೆ.
"ಆಪರೇಷನ್ ಸಿಂಧೂರ್ ನಂತರ, ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸದಂತೆ, ಈಗ ಅವರು ಭಾರತ ತಂಡದ ವಿಜಯೋತ್ಸವ ಆಚರಿಸಲು ಮೊಹ್ಸಿನ್ ನಖ್ವಿ ಮತ್ತು ಪಾಕಿಸ್ತಾನದಲ್ಲಿರುವ ಅವರ ಇತರ ಹ್ಯಾಂಡ್ಲರ್‌ಗಳ ಅನುಮತಿಗಾಗಿ ಕಾಯುತ್ತಿರುವಂತೆ ತೋರುತ್ತಿದೆ. ಮತ್ತೊಮ್ಮೆ, ಪಾಕಿಸ್ತಾನ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಒಂದೇ ಕಡೆ ಇರುವಂತೆ ಕಂಡುಬರುತ್ತಿದೆ ಎಂದು ಮಾಳವೀಯಾ ಬರೆದುಕೊಂಡಿದ್ದಾರೆ.
ಈ ಮಧ್ಯೆ ಫೈನಲ್ ಪಂದ್ಯವನ್ನು ಆಪರೇಷನ್ ಸಿಂಧೂರಕ್ಕೆ ಹೋಲಿಸಿದ್ದ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಕ್ರಿಕೆಟ್ ಪಂದ್ಯವನ್ನು ಯುದ್ಧಭೂಮಿಗೆ ಹೋಲಿಸುವುದು ಸರಿಯಲ್ಲ ಎಂದಿದೆ. ಗೆಲುವಿನ ಸನಿಹದಲ್ಲಿದ್ದಾಗ ಯಾವುದೇ ಒಬ್ಬ ನಾಯಕ ಥರ್ಡ್ ಅಂಪೈರ್ ಮಾತನ್ನು ಕೇಳಿ ಯುದ್ಧ ವಿರಾಮ ಘೋಷಿಸುವುದಿಲ್ಲ ಎಂಬುದನ್ನು ಭಾರತ ತಂಡವನ್ನು ನೋಡಿ ಕಲಿಯಬೇಕಾಗಿದೆ ಎಂದು ಕಾಂಗ್ರೆಸ್ ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.