ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಲವ್ ಜಿಹಾದ್ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್‌ಗೆ ಸೋಮವಾರ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿದೆ.
ಸದ್ಯ ತಲೆಮರೆಸಿಕೊಂಡಿರುವ 'ಮಾಸ್ಟರ್ ಮೈಂಡ್' ನಿದಾ ಖಾನ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ನಾಸಿಕ್ ನ್ಯಾಯಾಲಯ ನಿರಾಕರಿಸಿದೆ.
ನಿರೀಕ್ಷಣಾ ಜಾಮೀನು ಕೋರಿ ನಿದಾ ಖಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಏಪ್ರಿಲ್ 27 ರೊಳಗೆ ಆರೋಪಿಯ ಮನವಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಟಿಸಿಎಸ್ ನಾಸಿಕ್ ಘಟಕದಲ್ಲಿ ನಡೆದ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿರುವ ನಾಸಿಕ್ ಪೊಲೀಸರ ವಿಶೇಷ ತನಿಖಾ ತಂಡ(ಎಸ್‌ಐಟಿ) ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ನಿದಾ ಖಾನ್‌ಗಾಗಿ ಹುಡುಕಾಟ ನಡೆಸಿದ್ದು, ಯಾವುದೇ ಕ್ಷಣದಲ್ಲಿ ಬಂಧಿಸಬಹುದು.
ನಿದಾ ಖಾನ್ ಶನಿವಾರ ನಾಸಿಕ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ತಾನು ಎರಡು ತಿಂಗಳ ಗರ್ಭಿಣಿಯಾಗಿದ್ದು, ಅರ್ಜಿ ವಿಚಾರಣೆಯವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡುವಂತೆ ಕೋರಿದ್ದರು.
ಸೋಮವಾರದ ವಿಚಾರಣೆಯ ಸಮಯದಲ್ಲಿ, ಅವರ ವಕೀಲ ರಾಹುಲ್ ಕಾಸ್ಲಿವಾಲ್ ಅವರು ಮಧ್ಯಂತರ ಪರಿಹಾರಕ್ಕಾಗಿ ಮನವಿ ಮಾಡಿದರು. ಆದರೆ ಕೋರ್ಟ್ ನಿರಾಕರಿಸಿದೆ.