ಭೋಗಾಪುರಂ (ಆಂಧ್ರಪ್ರದೇಶ): ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಡೆದ ವೈಯಕ್ತಿಕ ನಿಂದನೆಗಳು ತಮಗೆ ತೀವ್ರ ನೋವುಂಟುಮಾಡಿವೆ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಶುಕ್ರವಾರ ಹೇಳಿದ್ದಾರೆ.
ಭೋಗಾಪುರಂನಲ್ಲಿ 'ಅಲ್ಲೂರಿ ಸೀತಾರಾಮ ರಾಜು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ'ದ ಉದ್ಘಾಟನೆ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ಮೌಲ್ಯಗಳು, ಶಿಸ್ತು ಮತ್ತು ದೇಶಭಕ್ತಿಯನ್ನು ಬೆಳೆಸುವಂತೆ ಪೋಷಕರಿಗೆ ಕರೆ ನೀಡಿದರು.
ಪ್ರಧಾನ ಮಂತ್ರಿಯವರ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳ ಕುರಿತು ಮಾತನಾಡಿದ ಪವನ್ ಕಲ್ಯಾಣ್, ಅತ್ಯಂತ ಕಠಿಣವಾಗಿ ಶ್ರಮಿಸುವವರೇ ಹೆಚ್ಚಾಗಿ ಟೀಕೆಗಳನ್ನು ಎದುರಿಸಬೇಕಾಗುತ್ತದೆ. 'ನಾವು ಎಷ್ಟೆಷ್ಟು ಶ್ರಮಿಸುತ್ತೇವೆಯೋ, ಅಷ್ಟಷ್ಟೇ ಹೆಚ್ಚು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಕಾಯಿಗಳನ್ನು ಬಿಟ್ಟ ಮರಕ್ಕೆ ಮಾತ್ರ ಕಲ್ಲು ಬೀಳುತ್ತದೆ' ಎಂಬ ಮಾತನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ರಾಜಕೀಯಕ್ಕೆ ಬಂದ ನಂತರ ಟೀಕೆಗಳಿಗೆ ಒಗ್ಗಿಕೊಂಡಿದ್ದರೂ, ಪ್ರಧಾನ ಮಂತ್ರಿಯವರ ವಿರುದ್ಧ ಕಠಿಣವಾದ ವೈಯಕ್ತಿಕ ದಾಳಿಗಳು ನಡೆಯುವುದನ್ನು ನೋಡಿ ತಮಗೆ ತೀವ್ರ ನೋವಾಗಿದೆ ಎಂದು ಅವರು ತಿಳಿಸಿದರು.
'ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಅನೇಕರು ಅವರ ಬಗ್ಗೆ ಕಠೋರವಾಗಿ ಮಾತನಾಡಿದ್ದಾರೆ. ಇದು ನನ್ನ ಕಣ್ಣಲ್ಲಿ ನೀರು ತರಿಸಿತು. ದೇಶಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಗೆ ನಾವು ನೀಡುವ ಗೌರವ ಇದೇನಾ?' ಎಂದು ಅವರು ಪ್ರಶ್ನಿಸಿದರು.
ಪ್ರಧಾನ ಮಂತ್ರಿಯವರ ನಾಯಕತ್ವದ ಹಿಂದೆ ಇರುವ ತ್ಯಾಗಗಳನ್ನು ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ಅಧಿಕಾರ ವಹಿಸಿಕೊಂಡಾಗಿನಿಂದ ನರೇಂದ್ರ ಮೋದಿ ಅವರು ಒಂದೇ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ಬಾಹ್ಯ ಹಾಗೂ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಲೇ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಅವರು ಎದುರಿಸಿರುವ ಕಷ್ಟಕಾರ್ಪಣ್ಯಗಳ ಬಗ್ಗೆ ಹೊಸ ಪೀಳಿಗೆಗೆ ತಿಳಿದಿಲ್ಲ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿಯವರಿಗೆ ತಮ್ಮ ದೃಢ ಬೆಂಬಲ ವ್ಯಕ್ತಪಡಿಸಿದ ಪವನ್ ಕಲ್ಯಾಣ್, ಯಾರಾದರೂ ನಿಮ್ಮ ವಿರುದ್ಧ ಮಾತನಾಡಿದರೆ, ಅದು ನಮ್ಮ ವಿರುದ್ಧವೇ ಮಾತನಾಡಿದಂತೆ. ನಾವು ನಿಮ್ಮೊಂದಿಗೆ ದೃಢವಾಗಿ ನಿಲ್ಲುತ್ತೇವೆ. ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಸಾಟಿಯಾಗಬಲ್ಲ ಅಥವಾ ದೇಶವನ್ನು ಮುನ್ನಡೆಸುವಾಗ ಅವರು ಅನುಭವಿಸಿದ ತ್ಯಾಗ ಹಾಗೂ ಕಷ್ಟಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲ ನಾಯಕರು ಇಂದು ದೇಶದಲ್ಲಿ ಯಾರೂ ಇಲ್ಲ ಎಂದರು.
ಬಲವಾದ ನಾಯಕತ್ವವು ಅಭಿವೃದ್ಧಿಯನ್ನು ಅತ್ಯಂತ ಚಿಕ್ಕ ಹಾಗೂ ದೂರದ ಪ್ರದೇಶಗಳಿಗೂ ತಲುಪಿಸುತ್ತದೆ ಎಂಬ ತಮ್ಮ ದೃಢ ನಂಬಿಕೆಯೇ ಎನ್‌ಡಿಎ (NDA) ಮೈತ್ರಿಕೂಟದ ಪರವಾಗಿ ತಾವು ನಿರಂತರವಾಗಿ ವಾದಿಸಲು ಕಾರಣವಾಗಿತ್ತು ಎಂದು ಹೇಳಿದರು.
ನಿರಂತರ ಟೀಕೆಗಳನ್ನು ಎದುರಿಸುತ್ತಿದ್ದರೂ, ನೀವು ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೀರಿ. ಅದಕ್ಕಾಗಿಯೇ ನಾನು ಮೈತ್ರಿಕೂಟದ ಅಗತ್ಯವನ್ನು ಒತ್ತಿ ಹೇಳುತ್ತೇನೆ. ಒಂದು ಕಾಲದಲ್ಲಿ ಭೋಗಾಪುರಂ ಅನ್ನು 'ಕೆಂಪು ಬಸ್ ಕೂಡ ತಲುಪದ ಸ್ಥಳ' ಎಂದು ಲೇವಡಿ ಮಾಡಲಾಗುತ್ತಿತ್ತು ಎಂಬುದನ್ನು ನೆನಪಿಸಿಕೊಂಡ ಅವರು, ಅಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯು ಅಭಿವೃದ್ಧಿಪರ ಆಡಳಿತವು ತರಬಲ್ಲ ಬದಲಾವಣೆಯನ್ನು ಸಾಬೀತುಪಡಿಸಿದೆ. ನಮ್ಮ ಮೈತ್ರಿಕೂಟವು ಸಾಧಿಸಿರುವುದಕ್ಕೆ ಭೋಗಾಪುರಂ ಸ್ವತಃ ಸಾಕ್ಷಿಯಾಗಿದೆ ಎಂದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಪವನ್ ಕಲ್ಯಾಣ್ ಅವರು ಪೋಷಕರಲ್ಲಿ, ವಿಶೇಷವಾಗಿ 25 ವರ್ಷದೊಳಗಿನ ಮಕ್ಕಳಿರುವವರಲ್ಲಿ, ಮೌಲ್ಯಗಳು, ಶಿಸ್ತು, ಸಾಂಸ್ಕೃತಿಕ ಅರಿವು ಮತ್ತು ರಾಷ್ಟ್ರೀಯ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವಂತೆ ಮನವಿ ಮಾಡಿದರು. ರಾಷ್ಟ್ರದ ಪ್ರಗತಿಗೆ ಬದ್ಧರಾದ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಮೂಲಕವೇ ಬಲಿಷ್ಠ ಭಾರತವನ್ನು ನಿರ್ಮಿಸುವ ಜವಾಬ್ದಾರಿ ಮನೆಯಿಂದಲೇ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು.