ನವದೆಹಲಿ: ಇಂಡಿಯಾ ಟುಡೇ ಮತ್ತು ಸಿವೋಟರ್ ನಡೆಸಿದ ಇತ್ತೀಚಿನ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಪ್ರಧಾನಿ ರೇಸ್‌ನಲ್ಲಿ ಆಮ್ ಆದ್ಮಿ ಪಕ್ಷದ(ಎಎಪಿ) ಮಾಜಿ ಕಾರ್ಯಕರ್ತ ಹಾಗೂ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ತಮ್ಮ ಮಾಜಿ ಗುರು, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನೇ ಹಿಂದಿಕ್ಕಿದ್ದಾರೆ.
ದೇಶದ ಜನಪ್ರಿಯ ನಾಯಕ ಯಾರು? ಪ್ರಧಾನಿ ಹುದ್ದೆಗೆ ಯಾರು ಸೂಕ್ತ? ಎಂಬ ಪ್ರಶ್ನೆಗೆ ಅತೀ ಹೆಚ್ಚು ಜನ ಮತ್ತೊಮ್ಮೆ ನರೇಂದ್ರ ಮೋದಿ ಅವರ ಹೆಸರನ್ನೇ ಆಯ್ಕೆ ಮಾಡಿದ್ದಾರೆ. ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೇ. 48.7 ರಷ್ಟು ಜನರ ಬೆಂಬಲದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೇ. 27.1 ರಷ್ಟು ಬೆಂಬಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಅದರಲ್ಲೂ, ತಮಿಳುನಾಡು ಮುಖ್ಯಮಂತ್ರಿಯಾಗಿ ಕೇವಲ ಮೂರು ತಿಂಗಳು ಪೂರೈಸಿರುವ ವಿಜಯ್ ಅವರು ಶೇ. 9.2 ರಷ್ಟು ಮತದಾರರ ಒಲವು ಗಳಿಸಿ ಅಚ್ಚರಿ ಮೂಡಿಸಿದ್ದಾರೆ.
ಇನ್ನು ಕಾಕ್ರೋಚ್ ಜನತಾ ಪಾರ್ಟಿ ಮೂಲಕ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಅಭಿಜೀತ್ ದೀಪ್ಕೆ ಅವರು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗಿಂತ ಹೆಚ್ಚು ಬೆಂಬಲ ಪಡೆಯುವ ಮೂಲಕ ಪ್ರಧಾನಿ ಹುದ್ದೆಗೆ ಹೆಚ್ಚಿನ ಜನರ ಆದ್ಯತೆಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ.
ಸಮೀಕ್ಷೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಶೇಕಡಾ 1.2 ರಷ್ಟು ಬೆಂಬಲ ಪಡೆದರೆ, ಅಭಿಜೀತ್ ದೀಪ್ಕೆ ಅವರು ಶೇಕಡಾ 1.3 ರಷ್ಟು ಬೆಂಬಲ ಗಳಿಸಿದ್ದಾರೆ. ಇಬ್ಬರ ನಡುವಿನ ವ್ಯತ್ಯಾಸವು ಕೇವಲ ಶೇಕಡಾ 0.1 ರಷ್ಟಿರಬಹುದು, ಆದರೆ ಇದರ ರಾಜಕೀಯ ಸಂಕೇತವನ್ನು ನಿರ್ಲಕ್ಷಿಸುವಂತಿಲ್ಲ. 2020 ರಿಂದ 2023 ರವರೆಗೆ ಕೇಜ್ರಿವಾಲ್ ನಾಯಕತ್ವದಲ್ಲಿ ಎಎಪಿಯ ಕಮ್ಯುನಿಕೇಷನ್ಸ್ ತಂಡದಲ್ಲಿ ಕಾರ್ಯನಿರ್ವಹಿಸಿದ್ದ ದಿಪ್ಕೆ, ಇತ್ತೀಚಿನ ಕೆಲ ತಿಂಗಳುಗಳಲ್ಲಿ ತಮ್ಮನ್ನು ರಾಜಕೀಯ ಸಂವಹನ ವೃತ್ತಿಪರನಿಂದ, ಪ್ರಭಾವಿ ಚಳವಳಿಯ ಮುಖವಾಗಿ ಗುರುತಿಸಿಕೊಂಡಿದ್ದಾರೆ.
ಮುಂಚೂಣಿಯಲ್ಲಿರುವ ಅಭ್ಯರ್ಥಿಗಳಿಗೆ ಹೋಲಿಸಿದರೆ ದೀಪ್ಕೆಗೆ ಸಿಕ್ಕಿರುವ ಶೇಕಡಾ 1.3 ರಷ್ಟು ಬೆಂಬಲವು ಚಿಕ್ಕ ಸಂಖ್ಯೆಯಾಗಿದ್ದರೂ, ಕೇಜ್ರಿವಾಲ್ ಅವರ ಜೊತೆ ಹೋಲಿಸಿದಾಗ ಅದು ಗಮನಾರ್ಹವಾಗಿ ಕಾಣಿಸುತ್ತದೆ.