ಲಖ್ನೌ: ಹಿಂದು ಧರ್ಮದ ಬಗ್ಗೆ ತಮ್ಮ ನಿಲುವನ್ನು ಪುನರುಚ್ಚರಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ “ಘರ್ ವಾಪ್ಸಿ” (ಹಿಂದು ಧರ್ಮಕ್ಕೆ ಮರುಪ್ರವೇಶ) ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದರು. ಜೊತೆಗೆ ಹಿಂದು ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
ನಿರಾಲಾ ನಗರದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದು ಧರ್ಮಕ್ಕೆ ಮರಳುವವರನ್ನು ಸಮಾಜವು ಬೆಂಬಲಿಸಿ ಕಾಳಜಿ ವಹಿಸಬೇಕು ಎಂದು ಹೇಳಿದರು.
ಹಿಂದು ಸಮಾಜ ಹೆಚ್ಚು ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಇರಬೇಕು. ಹಿಂದೂ ಸಮುದಾಯಕ್ಕೆ ತಕ್ಷಣದ ಯಾವುದೇ ಅಪಾಯ ಇಲ್ಲದಿದ್ದರೂ, ಹೆಚ್ಚು ಸಂಘಟಿತವಾಗಿದ್ದು ಶಕ್ತಿಶಾಲಿಯಾಗಬೇಕು ಮತ್ತು ಸದಾ ಎಚ್ಚರಿಕೆಯಿಂದಿರಬೇಕು ಎಂದರು.
ಹಿಂದು ಜನಸಂಖ್ಯೆ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಬಲವಂತ ಅಥವಾ ಪ್ರಲೋಭನಗಳ ಮೂಲಕ ಧರ್ಮಾಂತರವಾಗುತ್ತಿರುವ ಘಟನೆಗಳನ್ನು ಉಲ್ಲೇಖಿಸಿದರು.
ಪ್ರತಿ ಹಿಂದು ಕುಟುಂಬದಲ್ಲಿ ಕನಿಷ್ಠ ಮೂರು ಮಕ್ಕಳು ಇರಬೇಕು, ಕುಟುಂಬಕ್ಕೆ ಸರಾಸರಿ ಮೂರು ಮಕ್ಕಳಿಗಿಂತ ಕಡಿಮೆ ಜನನ ಪ್ರಮಾಣವಿದ್ದರೆ, ಆ ಸಮಾಜ ಭವಿಷ್ಯದಲ್ಲಿ ಕುಸಿತದ ಅಪಾಯವನ್ನು ಎದುರಿಸಬಹುದು ಎಂದು ವಿಜ್ಞಾನಿಗಳ ಅಭಿಪ್ರಾಯವನ್ನು ಉಲ್ಲೇಖಿಸಿದರು.
ಹೊಸದಾಗಿ ಮದುವೆಯಾಗುವ ದಂಪತಿಗಳಿಗೆ ಮೂರು ಮಕ್ಕಳನ್ನು ಹೊಂದಬೇಕೆಂಬುದನ್ನು ತಿಳಿಸಬೇಕು ಎಂದು ಹೇಳಿದ ಅವರು, ವಿವಾಹವನ್ನು ಕೇವಲ ವೈಯಕ್ತಿಕ ಇಚ್ಛೆ ಪೂರೈಸುವ ಸಾಧನವಾಗಿ ಅಲ್ಲ, ಸೃಷ್ಟಿಯ ನಿರಂತರತೆಯನ್ನು ಕಾಯ್ದುಕೊಳ್ಳುವ ಒಂದು ಸಂಸ್ಥೆಯಾಗಿ ಪರಿಗಣಿಸಬೇಕು ಎಂದರು.
ಅಕ್ರಮ ನುಸುಳುಕೋರರು (Illegal infiltration) ವಿಷಯವನ್ನು ಪ್ರಸ್ತಾಪಿಸಿದ ಮೋಹನ್ ಭಾಗವತ್, ಅಕ್ರಮ ಪ್ರವೇಶಗಳನ್ನು ಗುರುತಿಸಿ ದೇಶದಿಂದ ಹೊರಹಾಕಬೇಕು ಎಂದು ಹೇಳಿದರು. ಅಕ್ರಮ ನುಸುಳುಕೋರರಿಗೆ ನಮ್ಮ ದೇಶದಲ್ಲಿ ಉದ್ಯೋಗ ನೀಡಬಾರದು ಎಂದರು.
ಸಾಮಾಜಿಕ ಸಾಮರಸ್ಯ ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಸಾಮರಸ್ಯ ಇಲ್ಲದಾಗ ಭೇದಭಾವ ಉಂಟಾಗುತ್ತದೆ. ನಾವು ಎಲ್ಲರೂ ಒಂದೇ ದೇಶದ, ಒಂದೇ ತಾಯ್ನಾಡಿನ ಮಕ್ಕಳು ಎಂದು ಹೇಳುತ್ತಾ, ಸನಾತನ ತತ್ವವು ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
ಅಮೆರಿಕಾ ಮತ್ತು ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಇರುವ ಗುಂಪುಗಳು ಭಾರತದ ಸಾಮಾಜಿಕ ಸಾಮರಸ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. ನಾಗರಿಕರು ಹೆಚ್ಚು ಜಾಗರೂಕರಾಗಿದ್ದು ಪರಸ್ಪರ ವಿಶ್ವಾಸವನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.