ಅಫ್ಘಾನಿಸ್ತಾನ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಪೂರ್ಣ ಬೆಂಬಲವು ಭಾರತದ ರಾಜತಾಂತ್ರಿಕತೆಗೆ ಮತ್ತೊಂದು ಹಿನ್ನಡೆಯಾಗಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಟೀಕಿಸಿದೆ. ಜಗತ್ತು, ವಿಶೇಷವಾಗಿ ಅಮೆರಿಕ, ಸ್ವಯಂ ಘೋಷಿತ ವಿಶ್ವಗುರುವಿನ ನಿಜಸ್ವರೂಪವನ್ನು ಅರಿತುಕೊಂಡಿದೆ ಎಂದು ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ ಖಾತೆಯಲ್ಲಿ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನಿರ್ ನೀಡಿದ್ದ ಪ್ರಚೋದನಕಾರಿ ಹೇಳಿಕೆಗಳು ಏಪ್ರಿಲ್ 22, 2025 ರಂದು ಪಹಲ್ಗಾಮ್ ದಾಳಿಗೆ ಕಾರಣವಾಗಿತ್ತು. ಪಹಲ್ಗಾಮ್ ದಾಳಿಗೆ ಪ್ರಚೋದನೆ ನೀಡದ್ದೇ ಪಾಕಿಸ್ತಾನ. ಅಂಥವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಈಗ ಪ್ರಶಂಸಿಸಿದ್ದಾರೆ.
ಆಫ್ಘಾನಿಸ್ತಾನ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಧ್ಯಕ್ಷ ಟ್ರಂಪ್ ನೀಡಿದ ಸ್ಪಷ್ಟ ಮತ್ತು ಗಟ್ಟಿ ಬೆಂಬಲವು ಭಾರತದ ರಾಜತಾಂತ್ರಿಕತೆಗೆ ಮತ್ತೊಂದು ಹಿನ್ನಡೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಮೆರಿಕದೊಂದಿಗೆ ನಮ್ಮ ಆರ್ಥಿಕ ರಾಜತಾಂತ್ರಿಕತೆಯು ವಿಫಲವಾಗಿದೆ. ವಿಶೇಷವಾಗಿ ಅಮೆರಿಕ ರೈತರಿಂದ ಆಮದು ಮಾಡುವ ದೃಢ ಬದ್ಧತೆಗಳನ್ನು ಭಾರತ ನೀಡಿರುವಾಗ, ಭಾರತದಿಂದ ಹೆಚ್ಚಿನ ರಫ್ತುಗಳಿಗೆ ಅಮೆರಿಕ ಅಸ್ಪಷ್ಟ ಬದ್ಧತೆಗಳನ್ನು ಮಾತ್ರ ನೀಡಿದೆ. ಆದರೂ ಪ್ರಧಾನಿ ಮೋದಿ ಏಕಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು. ಒಪ್ಪಂದದ ಕೆಲವೇ ದಿನಗಳಲ್ಲಿ ಅಮೆರಿಕ ಭಾರತದಿಂದ ಆಮದು ಮಾಡುವ ಸೌರ ಫಲಕಗಳ ಮೇಲೆ 125.87 ಶೇಕಡಾ ಸುಂಕ ವಿಧಿಸಿದೆ ಎಂದೂ ಅವರು ಉಲ್ಲೇಖಿಸಿದರು.
ನಮ್ಮ ವ್ಯೂಹಾತ್ಮಕ ರಾಜತಾಂತ್ರಿಕತೆಗೆ ಅಧ್ಯಕ್ಷ ಟ್ರಂಪ್ ಮತ್ತೆ ಆಘಾತ ನೀಡಿದ್ದಾರೆ. ಅವರು ಪಾಕಿಸ್ತಾನದ ಸ್ಥಾಪಿತ ವ್ಯವಸ್ಥೆಯೊಂದಿಗೆ ಹತ್ತಿರವಾಗುತ್ತಾ, ಭಾರತ–ಪಾಕಿಸ್ತಾನವನ್ನು ಒಂದೇ ಚೌಕಟ್ಟಿನಡಿಯಲ್ಲಿ ಪರಿಗಣಿಸುತ್ತಿದ್ದಾರೆ ಎಂದರು.
ಭಾರತದ ಪ್ರಧಾನಮಂತ್ರಿ ಮೋದಿಯವರು ತಮ್ಮ ಮಾರ್ಗಗಳಿಂದ ಹೋದಲ್ಲಿ ಬಂದಲ್ಲಿ ಪ್ರಶಸ್ತಿಗಳನ್ನು ಪಡೆಯಬಹುದು. ಆದರೆ ಸ್ವಯಂ ಘೋಷಿತ ವಿಶ್ವಗುರುವಿನ ನಿಜಸ್ವರೂಪ ಬಹಿರಂಗವಾಗಿದೆ; ಜಗತ್ತು, ವಿಶೇಷವಾಗಿ ಅಮೆರಿಕ, ಅವರ ಮಟ್ಟವನ್ನು ಅಳೆದಿದೆ ಎಂದು ಟೀಕಿಸಿದ್ದಾರೆ.
ಪಾಕಿಸ್ತಾನ–ಆಫ್ಘಾನಿಸ್ತಾನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಟ್ರಂಪ್, ನಾನು ಪಾಕಿಸ್ತಾನದೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದೇನೆ. ಅವರಿಗೆ ಒಬ್ಬ ಉತ್ತಮ ಪ್ರಧಾನಮಂತ್ರಿ ಹಾಗೂ ಒಬ್ಬ ಉತ್ತಮ ಜನರಲ್ ಇದ್ದಾರೆ. ಪಾಕಿಸ್ತಾನ ಅತ್ಯುತ್ತಮವಾಗಿ ಮುಂದುವರಿಯುತ್ತಿದೆ ಎಂದು ಹೇಳಿಕೆ ನೀಡಿರುವುದು ಭಾರೀ ಸುದ್ದಿಯಾಗಿದೆ.