ನವದೆಹಲಿ: ಕಳೆದ ಐದು ವರ್ಷಗಳಿಂದ ಬೀದಿ ಪ್ರಾಣಿಗಳ ವಿಚಾರದಲ್ಲಿ ನಿಯಮಗಳ ಅನುಷ್ಠಾನದ ಕೊರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ನಾಯಿ ಕಡಿತದ ಘಟನೆಗಳಿಗೆ 'ಭಾರಿ ಪರಿಹಾರ' ಪಾವತಿಸಲು ರಾಜ್ಯಗಳನ್ನೇ ಕೇಳುವುದಾಗಿ ಮಂಗಳವಾರ ಹೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ಪೀಠವು, ನಾಯಿ ಕಡಿತದ ಘಟನೆಗಳಿಗೆ ನಾಯಿ ಪ್ರಿಯರು ಮತ್ತು ಅವುಗಳಿಗೆ ಆಹಾರ ನೀಡುವವರು ಸಹ 'ಜವಾಬ್ದಾರರು' ಮತ್ತು 'ಹೊಣೆಗಾರರು' ಎಂದು ಹೇಳಿತು.
'ಮಕ್ಕಳು ಅಥವಾ ವೃದ್ಧರಿಗೆ ಪ್ರತಿಯೊಂದು ನಾಯಿ ಕಡಿತ, ಸಾವು ಅಥವಾ ಗಾಯಕ್ಕೆ, ಆಯಾ ರಾಜ್ಯ ಸರ್ಕಾರಗಳು ಭಾರಿ ಪರಿಹಾರ ನೀಡುವಂತೆ ನಾವು ಕೇಳಲಿದ್ದೇವೆ. ಏಕೆಂದರೆ, ಅವರು ಕಳೆದ ಐದು ವರ್ಷಗಳಲ್ಲಿ ನಿಯಮಗಳ ಅನುಷ್ಠಾನದ ವಿಚಾರದಲ್ಲಿ ಏನನ್ನೂ ಮಾಡಿಲ್ಲ. ಅಲ್ಲದೆ, ಈ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವವರ ಮೇಲೆ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುತ್ತದೆ. ನೀವು ಈ ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಿದ್ದರೆ, ನೀವು ಅವುಗಳನ್ನು ನಿಮ್ಮ ಮನೆಗೆ ಏಕೆ ಕರೆದೊಯ್ಯಬಾರದು. ಈ ನಾಯಿಗಳು ಏಕೆ ಸುತ್ತಾಡಬೇಕು, ಕಚ್ಚಬೇಕು ಮತ್ತು ಜನರನ್ನು ಹೆದರಿಸಬೇಕು?' ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು.
ನ್ಯಾಯಮೂರ್ತಿ ನಾಥ್ ಅವರ ಅಭಿಪ್ರಾಯಗಳಿಗೆ ಸಮ್ಮತಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ಮೆಹ್ತಾ, 'ನಾಯಿಗಳು 9 ವರ್ಷದ ಮಗುವಿನ ಮೇಲೆ ದಾಳಿ ಮಾಡಿದಾಗ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಅವುಗಳಿಗೆ ಆಹಾರ ನೀಡುತ್ತಿರುವ ಸಂಸ್ಥೆಯೇ? ಈ ಸಮಸ್ಯೆಗೆ ನಾವು ಕಣ್ಣು ಮುಚ್ಚಿ ಕೂರಬೇಕೆಂದು ನೀವು ಬಯಸುತ್ತೀರಿ' ಎಂದು ಹೇಳಿದರು.
ಬೀದಿ ನಾಯಿಗಳನ್ನು ಸಾಂಸ್ಥಿಕ ಪ್ರದೇಶಗಳು ಮತ್ತು ರಸ್ತೆಗಳಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ ನವೆಂಬರ್ 7, 2025ರ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಸಲ್ಲಿಸಲಾದ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.