ಭೋಪಾಲ್: ಕಲುಷಿತ ನೀರು ಸೇವನೆಯಿಂದ ಉಂಟಾದ ಭೇದಿಯಿಂದ ಭಾಗೀರಥ್‌ಪುರದಲ್ಲಿ 20 ಕ್ಕೂ ಹೆಚ್ಚು ಜನರು ಮೃತಪಟ್ಟ ಬೆನ್ನಲ್ಲೇ ಇದೀಗ ಇಂದೋರ್ ಜಿಲ್ಲೆಯ ಮೊವ್ ಕಂಟೋನ್ಮೆಂಟ್ ಪಟ್ಟಣದ ಹಲವು ಕಡೆಗಳಲ್ಲಿ ಜಾಂಡೀಸ್ ವರದಿಯಾಗುತ್ತಿದೆ. ಮೋವ್‌ನ ಎರಡು ಡಜನ್‌ಗಿಂತಲೂ ಹೆಚ್ಚು ನಿವಾಸಿಗಳು, ಬಹುತೇಕ ಮಕ್ಕಳು, ಜಾಂಡೀಸ್‌ನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
ಇದು ಕೂಡಾ ಕಲುಷಿತ ಕುಡಿಯುವ ನೀರಿನಿಂದ ಉಂಟಾಗಿದೆ ಎನ್ನಲಾಗಿದೆ. ಅವರಲ್ಲಿ ಸುಮಾರು ಒಂಬತ್ತರಿಂದ ಹತ್ತು ಮಕ್ಕಳನ್ನು ರೆಡ್ ಕ್ರಾಸ್ ಸೊಸೈಟಿ ಆಸ್ಪತ್ರೆ ಮತ್ತು ಮಧ್ಯ ಭಾರತ್ ಆಸ್ಪತ್ರೆ ಸೇರಿದಂತೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚಂದರ್ ಮಾರ್ಗ್ ಮತ್ತು ಮೋತಿ ಮಹಲ್ ನಡುವಿನ ಅನೇಕ ಪ್ರದೇಶಗಳಲ್ಲಿ ಪ್ರಕರಣಗಳು ವರದಿಯಾಗಿವೆ.
ಮೋತಿ ಮಹಲ್ ಪ್ರದೇಶ ಹೆಚ್ಚು ಹಾನಿಗೊಳಗಾದಂತೆ ತೋರುತ್ತಿದೆ. ಕೆಸರು ಮತ್ತು ದುರ್ವಾಸನೆಯ ನೀರು ಸರಬರಾಜು ಆಗುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಕಲುಷಿತ ನೀರು ಸೇವಿಸಿ ಹೆಚ್ಚಾಗಿ ಶಾಲೆಗೆ ಹೋಗುವ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಒಂಬತ್ತಕ್ಕಿಂತ ಹೆಚ್ಚು ಜನರು, ಹೆಚ್ಚಾಗಿ ಮಕ್ಕಳು ಸದ್ಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಖಾಸಗಿ ಆಸ್ಪತ್ರೆಗಳಲ್ಲಿ ಹಲವಾರು ಮಕ್ಕಳು ಚಿಕಿತ್ಸೆ ಪಡೆಯುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಿರಬಹುದು ಎಂದು ನಿವಾಸಿಗಳು ಹೇಳುತ್ತಾರೆ.
ಮೊವ್ ಕಂಟೋನ್ಮೆಂಟ್ ಟೌನ್‌ನಲ್ಲಿ ಜಾಂಡೀಸ್ ವರದಿಗಳ ನಡುವೆ ಗುರುವಾರ ಹಲವಾರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ವಿವರವಾದ ಆರೋಗ್ಯ ಸಮೀಕ್ಷೆಯನ್ನು ಶುಕ್ರವಾರದಿಂದ ಪ್ರಾರಂಭಿಸಲಾಗುವುದು ಎಂದು ಇಂದೋರ್ ಕಲೆಕ್ಟರ್ ಆಶಿಶ್ ಸಿಂಗ್ ವರ್ಮಾ ಸುದ್ದಿಗಾರರಿಗೆ ಹೇಳಿದ್ದಾರೆ.
ಜಾಂಡೀಸ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಂಸದೆ ಮತ್ತು ಸ್ಥಳೀಯ ಬಿಜೆಪಿ ಶಾಸಕಿ ಉಷಾ ಠಾಕೂರ್, ನೀರು ಸರಬರಾಜು ಮಾಡುವಲ್ಲಿ ಸಮಸ್ಯೆಯಾಗಿದೆ. ಈ ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರವಾಗುತ್ತಿರುವುದೇ ಜಾಂಡೀಸ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಈ ಸಂಬಂಧ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರೊಂದಿಗೆ ಮಾತನಾಡಿದ್ದು, ಅವರು ಸಮಸ್ಯೆಯ ಮೂಲ ಕಾರಣವನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ನಾವು ಕುಡಿಯುವ ನೀರನ್ನು ಬಕೆಟ್‌ಗಳಲ್ಲಿ ಸಂಸ್ಕರಿಸಲು ಕುಟುಂಬಗಳಿಗೆ ಸಲಹೆ ನೀಡಿರುವುದಾಗಿ ತಿಳಿಸಿದರು.