ನವದೆಹಲಿ: ಇರಾನ್ ಮತ್ತು ಅಮೆರಿಕ ನಡುವಿನ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತ ಮಧ್ಯಸ್ಥಿಕೆಯನ್ನು ರಷ್ಯಾ ಪ್ರಸ್ತಾಪಿಸಿದೆ.
ಭಾರತದ ವ್ಯಾಪಕ ರಾಜತಾಂತ್ರಿಕ ಅನುಭವ ಮತ್ತು ಜಾಗತಿಕ ಖ್ಯಾತಿಯನ್ನು ರಷ್ಯಾ ಉಲ್ಲೇಖಿಸಿದೆ. ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಗಾಗಿ ನವದೆಹಲಿಯಲ್ಲಿದ್ದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲೀನ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ವಿಷಯದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬಹುದು ಎಂದು ಅವರು ಹೇಳಿದರು.
"ತುರ್ತು ಸಮಸ್ಯೆಗಳನ್ನು ಪರಿಹರಿಸಲು ಅಮೆರಿಕ ಮತ್ತು ಇರಾನ್ ನಡುವೆ ಸಂವಾದ ಸ್ಥಾಪಿಸಲು ಪಾಕಿಸ್ತಾನ ಸಹಾಯ ಮಾಡುತ್ತಿದೆ. ಇರಾನ್ ಮತ್ತು ಅದರ ಅರಬ್ ಮಿತ್ರರಾಷ್ಟ್ರಗಳ ನಡುವೆ ದೀರ್ಘಕಾಲೀನ ಮಧ್ಯಸ್ಥಿಕೆ ವಹಿಸಲು ತನ್ನ ವಿಶಾಲ ರಾಜತಾಂತ್ರಿಕ ಅನುಭವ ಹೊಂದಿರುವ ಭಾರತ ಸೂಕ್ತವಾಗಿರುತ್ತದೆ" ಎಂದು ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ.
ರಷ್ಯಾ ವಿದೇಶಾಂಗ ಸಚಿವರ ಈ ಹೇಳಿಕೆ ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಭೇಟಿ ವೇಳೆ ಬಂದಿರುವುದು ಮಹತ್ವ ಪಡೆದುಕೊಂಡಿದೆ.
ಮಧ್ಯಪ್ರಾಚ್ಯ ಉದ್ವಿಗ್ನತೆಗಳ ಬಗ್ಗೆ ಜಾಗತಿಕ ಆತಂಕ ಹೆಚ್ಚಾಗಿರುವುದು ಹಾಗೂ ರಷ್ಯಾ ಮತ್ತು ಇರಾನಿನ ತೈಲದ ಮೇಲಿನ ಯುಎಸ್ ನಿರ್ಬಂಧಗಳ ವಿನಾಯಿತಿಗಳ ಸನ್ನಿಹಿತ ಮುಕ್ತಾಯದ ಸಂದರ್ಭದಲ್ಲಿ ನವದೆಹಲಿಗೆ ರಷ್ಯಾದ ರಾಜತಾಂತ್ರಿಕ ಭೇಟಿ ನೀಡಿದ್ದಾರೆ.
ಪ್ರಸ್ತುತ ಬ್ರಿಕ್ಸ್ ಅಧ್ಯಕ್ಷರಾಗಿ ಮತ್ತು ಪ್ರಾದೇಶಿಕ ಸ್ಥಿರತೆಯಲ್ಲಿ ನೇರ ಆಸಕ್ತಿ ಹೊಂದಿರುವ ಪ್ರಮುಖ ಇಂಧನ ಗ್ರಾಹಕನಾಗಿ ಭಾರತ ಪ್ರಮುಖ ಪಾಲುದಾರರನ್ನು ಸಂವಾದಕ್ಕಾಗಿ ಒಟ್ಟುಗೂಡಿಸಲು ಸಹಾಯ ಮಾಡುತ್ತದೆ ಎಂದು ಲಾವ್ರೊವ್ ಹೇಳಿದ್ದಾರೆ.
ಎಮಿರೇಟ್ಸ್ ಮೇಲಿನ ಇತ್ತೀಚಿನ ಇರಾನಿನ ದಾಳಿಗಳನ್ನು ಉಲ್ಲೇಖಿಸಿ, ನವದೆಹಲಿ ಟೆಹ್ರಾನ್ ಮತ್ತು ಅಬುಧಾಬಿಯನ್ನು ಮಾತುಕತೆಗೆ ಕರೆಯಬಹುದು ಮತ್ತು "ಹಗೆತನವನ್ನು ತಪ್ಪಿಸಲು" ಸಹಾಯ ಮಾಡಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಬ್ರಿಕ್ಸ್ ಅಧ್ಯಕ್ಷ ಸ್ಥಾನದಲ್ಲಿರುವ ಭಾರತ ಈ ಪ್ರದೇಶದಿಂದ ತೈಲ ಪಡೆಯುವಲ್ಲಿ ನೇರವಾಗಿ ಆಸಕ್ತಿ ಹೊಂದಿದೆ. ಆದ್ದರಿಂದ ಭಾರತ ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ನ್ನು ಆಹ್ವಾನಿಸಬಹುದು, ಎರಡೂ ದೇಶಗಳ ನಡುವಿನ ಯಾವುದೇ ಹಗೆತನವನ್ನು ಹೇಗೆ ತಪ್ಪಿಸಬಹುದು ಎಂಬುದರ ಕುರಿತು ಪರಸ್ಪರ ಮಾತುಕತೆ ನಡೆಸಲು ಪ್ರಾರಂಭಿಸಬಹುದಲ್ಲವೇ?" ಎಂದು ಅವರು ಹೇಳಿದರು.
ಇರಾನ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಹಗೆತನವನ್ನು ಹೆಚ್ಚಿಸಲು ಅಮೆರಿಕ ಮತ್ತು ಇಸ್ರೇಲ್ ಪ್ರಯತ್ನಿಸುತ್ತಿವೆ ಎಂದು ರಷ್ಯಾದ ವಿದೇಶಾಂಗ ಸಚಿವರು ಆರೋಪಿಸಿದರು, ಆದರೆ ಮಾಸ್ಕೋ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಪ್ರಯತ್ನಗಳನ್ನು ಅನುಸರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
"ಪ್ರತಿಯೊಂದು ಸಂಘರ್ಷದ ಮೂಲ ಕಾರಣಗಳನ್ನು ನಾವು ಅರ್ಥಮಾಡಿಕೊಳ್ಳಬೇಕು; ಇರಾನ್ ನಲ್ಲಿ ಇದು ಯುಎಸ್ ಮತ್ತು ಇಸ್ರೇಲ್‌ನ ಅಪ್ರಚೋದಿತ ಆಕ್ರಮಣವಾಗಿದೆ" ಎಂದು ಅವರು ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸಲು ರಾಜತಾಂತ್ರಿಕತೆ ಮತ್ತು ಪ್ರಾದೇಶಿಕವಾಗಿ ತೊಡಗಿಸಿಕೊಳ್ಳುವುದರ ಅಗತ್ಯವನ್ನು ಅವರು ಲಾವ್ರೊವ್ ಹೇಳಿದ್ದಾರೆ.