ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಗುರುವಾರ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 21 ಟಿವಿಕೆ ಶಾಸಕರು ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರು ಸೇರಿದಂತೆ ಒಟ್ಟು 23 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಕಾಂಗ್ರೆಸ್, ಸುಮಾರು ಆರು ದಶಕಗಳ ನಂತರ ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೊಳ್ಳುತ್ತಿದೆ.
ಇಂದು ಬೆಳಗ್ಗೆ 10 ಗಂಟೆಗೆ ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಈ ವೇಳೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್ ನಾಯಕ ಎಸ್. ರಾಜೇಶ್ ಕುಮಾರ್ ಅವರ ಮಾತುಗಳನ್ನು ಸರಿಪಡಿಸಿ, ಅವರಿಗೆ ತಿದ್ದಿ ಬುದ್ಧಿ ಹೇಳಿಗೆ ಘಟನೆ ನಡೆಯಿತು.
ಇದು ಪ್ರಮಾಣವಚನ ಸ್ವೀಕಾರ ಸಮಾರಂಭ. ನಿಮಗೆ ನೀಡಲಾದ ಲಿಖಿತ ಪ್ರಮಾಣ ವಚನವನ್ನು ಮಾತ್ರ ಓದಿ ಎಂದು ಸಲಹೆ ನೀಡಿದರು.
ಕಿಳ್ಳಿಯೂರು ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರದ ಭಾಗವಾಗಿದ್ದು, ಅವರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಚೆನ್ನೈನ ಲೋಕ ಭವನದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ,ರಾಜೇಶ್ ಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವಾಗ, ಇದ್ದಕ್ಕಿದ್ದಂತೆ ಕಾಂಗ್ರೆಸ್ ನಾಯಕರಾದ ಕಾಮರಾಜ್, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಶ್ಲಾಘಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ರಾಜ್ಯಪಾಲರು 'ಇದು ನಿಮ್ಮ ಪ್ರಮಾಣ ವಚನದ ಭಾಗವಲ್ಲ' ಎಂದು ಹೇಳಿದರು. ನಿಮಗೆ ನೀಡಲಾದ ಲಿಖಿತ ಪ್ರಮಾಣ ವಚನವನ್ನು ಮಾತ್ರ ಓದಿ ಎಂದು ಸಲಹೆ ನೀಡಿದರು.
ತಕ್ಷಣ, ಅಧಿಕಾರಿಯೊಬ್ಬರು ಕುಮಾರ್ ಅವರನ್ನು ಸಂಪರ್ಕಿಸಿ ಅವರ ಮುಂದೆ ಇರಿಸಲಾದ ಲಿಖಿತ ಪ್ರಮಾಣವಚನವನ್ನು ತೋರಿಸಿದರು. ನಂತರ, ಅವರು ಪ್ರಮಾಣ ವಚನವನ್ನು ಪೂರ್ಣಗೊಳಿಸಿದರು.